ವೈದ್ಯಕೀಯ ಪ್ರವೇಶ ಶುಲ್ಕ ಏರಿಕೆ: ಎಐಡಿಎಸ್‍ಓ ಖಂಡನೆ

Update: 2022-09-25 17:36 GMT

ಬೆಂಗಳೂರು, ಸೆ.25: ಶಿಕ್ಷಣದ ಖಾಸಗೀಕರಣ, ಶುಲ್ಕ ಏರಿಕೆ, ಸರಕಾರಗಳ ಖಾಸಗಿ ಹಿತಾಸಕ್ತಿಪರ ನೀತಿಗಳಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು, ಬಹುಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಆಲ್ ಇಂಡಿಯಾ ಡೆಮೊಕ್ರಟಿಕ್ ಸ್ಟೂಡೆಂಟ್ಸ್ ಆರ್ಗಾನೈಜೆಷನ್(ಎಐಡಿಎಸ್‍ಓ) ಕಳವಳವ್ಯಕ್ತಪಡಿಸಿದೆ.

ಎಐಡಿಎಸ್‍ಓನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ‘ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಲು ಸರಕಾರ ನಿರ್ಧರಿಸಿದೆ. ಅಂದರೆ, ಈ ವರ್ಷದಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ದಾಖಲಾಗುವ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ರೂ.12,884 ಪಾವತಿಸಬೇಕಾಗಿದೆ. ಅಂದರೆ, ಈವರೆವಿಗೂ ಇದ್ದ  1,28,746ರೂ.ಗಳ ಜಾಗದಲ್ಲಿ ಇನ್ನೂ ಮುಂದೆ ವಿದ್ಯಾರ್ಥಿಗಳು 1,41,630ರೂ.ಗಳಷ್ಟು ಹೆಚ್ಚುವರಿಯಾಗಿ ಶುಲ್ಕ ಪಾವತಿಸಬೇಕು. ಈ ನಿರ್ಧಾರವನ್ನು ಇತ್ತೀಚೆಗೆ ಕೆಲವು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸರಕಾರ ನಡೆಸಿದ ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸರಕಾರಿ ಕಾಲೇಜುಗಳ ಪದವಿ ದಾಖಲಾತಿ ಈ ವರ್ಷ ಗಣನೀಯವಾಗಿ ಕುಸಿದಿರುವುದು ಈ ಸಮಸ್ಯೆಗಳಿಗೆ ಹಿಡಿದಿರುವ ಕನ್ನಡಿಯಾಗಿದೆ. ಇಂದಿನ ವಾಸ್ತವ ಪರಿಸ್ಥಿತಿಯನ್ನು ಇದು ಎತ್ತಿ ತೋರಿಸುತ್ತದೆ. ಹೀಗಿರುವಾಗ ಈ ಶುಲ್ಕ ಏರಿಕೆಯು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ಉಳಿಸುತ್ತದೆ. ಹಾಗಾಗಿ, ಖಾಸಗಿ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವ ಶುಲ್ಕ ಏರಿಕೆಯ ನಿರ್ಧಾರವನ್ನು ಸರಕಾರ ಈ ಕೂಡಲೇ ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News