‘108 ಆ್ಯಂಬುಲೆನ್ಸ್’ ಸೇವೆಯಲ್ಲಿ ವ್ಯತ್ಯಯ: ರಾಜ್ಯದಲ್ಲಿ ಆ್ಯಂಬುಲೆನ್ಸ್ ಸೇವೆ ಅಸ್ತವ್ಯಸ್ತ

Update: 2022-09-26 03:13 GMT
ಫೈಲ್‌ ಫೋಟೊ

ಬೆಂಗಳೂರು: ಆರೋಗ್ಯ ಸಹಾಯವಾಣಿ ಕೇಂದ್ರದಲ್ಲಿ ಉದ್ಭವಿಸಿರುವ ಹಾರ್ಡ್‍ವೇರ್ ಸಮಸ್ಯೆಯಿಂದಾಗಿ ಆ್ಯಂಬುಲೆನ್ಸ್ ಸೇವೆಗೆ ಕರೆ ಮಾಡುವ 108 ದೂರವಾಣಿ ಸಂಖ್ಯೆಗೆ ಕರೆ ಹೋಗುತ್ತಿಲ್ಲವಾದ್ದರಿಂದ ರಾಜ್ಯಾದ್ಯಂತ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ 108 ಸೇವೆಯ ಆ್ಯಂಬುಲೆನ್ಸ್ ಚಾಲಕರು ಕರೆ ಸ್ವೀಕರಿಸಲು ಸಾಧ್ಯವಾಗದ ಕಾರಣ ಜನಸಾಮಾನ್ಯರು ದುಬಾರಿ ಖಾಸಗಿ ಆ್ಯಂಬುಲೆನ್ಸ್ ಗಳಿಗೆ ಮೊರೆಹೋಗಬೇಕಾದ ಸ್ಥಿತಿ ಇದೆ.‌

ಸರ್ಕಾರಿ ನಿಯಂತ್ರಣದ GVK-EMRI ಲಾಭರಹಿತ ತುರ್ತು ಸೇವಾ ಪೂರೈಕೆದಾರ ಸಂಸ್ಥೆ ಈ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ನಿರ್ವಹಿಸುತ್ತಿದೆ. 108 ಕರೆ ಕೇಂದ್ರವು ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು, ಎರಡು ನಿಮಿಷಗಳ ಒಳಗಾಗಿ ಆ್ಯಂಬುಲೆನ್ಸ್ ಹಂಚಿಕೆ ಮಾಡುತ್ತದೆ. ಆದರೆ ತಾಂತ್ರಿಕ ದೋಷದಿಂದಾಗಿ ಈ ಅವಧಿ ಇದೀಗ 6-7 ನಿಮಿಷ ಆಗುತ್ತಿದೆ.

ಕೇಂದ್ರದಲ್ಲಿ ಕೆಲ ಹಾರ್ಡ್‍ವೇರ್ ಸಮಸ್ಯೆ ಉಂಟಾಗಿದ್ದು, GVK-EMRI ಇದನ್ನು ಸರಿಪಡಿಸಿದೆ. ಈ ವ್ಯವಸ್ಥೆ 15 ವರ್ಷ ಹಳೆಯದಾಗಿರುವ ಹಿನ್ನೆಲೆಯಲ್ಲಿ ಮಾಲ್‍ವೇರ್ ದಾಳಿಗೆ ಒಳಗಾಗುವ ಸಾಧ್ಯತೆ ಅಧಿಕ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಆ್ಯಂಬುಲೆನ್ಸ್ ಚಾಲಕರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯಲ್ಲಿ ಕರೆ ಸ್ವೀಕರಿಸುವಂತೆ ಇಲಾಖೆ ಸೂಚನೆ ನೀಡಿದೆ. ಅಂತರ್ ಸೌಲಭ್ಯ ವರ್ಗಾವಣೆಗೆ ಆಸ್ಪತ್ರೆಗಳು ಮುಂದಾಗಬೇಕು ಎಂದು ಆದೇಶಿಸಿದೆ. 108 ಕರೆಗಳನ್ನು 112 ಸಂಖ್ಯೆಗೆ ವರ್ಗಾಯಿಸಲಾಗಿದೆ. 112 ಸಂಖ್ಯೆಯ ಕೇಂದ್ರದಲ್ಲಿ ಸಿಬ್ಬಂದಿಯನ್ನು ಕೂಡಾ ಹೆಚ್ಚಿಸಲಾಗಿದೆ ಎಂದು ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

108 ಸಂಖ್ಯೆಯ ಮೇಲಿನ ಹೊರೆ  ಕಡಿಮೆ ಮಾಡಲು 104 ಸಂಖ್ಯೆಯನ್ನೂ ಬಳಸಿಕೊಳ್ಳಲಾಗಿದೆ. ಮಿಸ್ಡ್ ಕಾಲ್‍ಗಳನ್ನು ಪತ್ತೆ ಮಾಡುವ ಸೇವೆಯೂ ಲಭ್ಯವಿದೆ ಎಂದು ವಿವರಿಸಿದ್ದಾರೆ. ಈ ಬಗ್ಗೆ deccanherald.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News