ಧಾರವಾಡ: ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್ ಹಾಕಿ ಪೇಚಿಗೆ ಸಿಲುಕಿದ ಬಿಜೆಪಿ ನಾಯಕರು!

Update: 2022-09-26 09:31 GMT

ಹುಬ್ಬಳ್ಳಿ-ಧಾರವಾಡ: ಇಂದು ( ಸೋಮವಾರ)  ನಗರದ ಹೊರವಲಯದಲ್ಲಿ ನಡೆಯಲಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಕೋರುವ ಬ್ಯಾನರ್‌ ಒಂದರಲ್ಲಿ ‘ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ’ ಎಂದು ಬರೆದಿದ್ದು, ಇದರಿಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಪಹಾಸ್ಯಕ್ಕೀಡಾಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತಿಸುವ ಬ್ಯಾನರ್ ಅನ್ನು ಶಾಸಕ ಅರವಿಂದ ಬೆಲ್ಲದ್ ಹಾಗೂ ಪ್ರಹ್ಲಾದ್ ಜೋಶಿ ಅವರ  ಪರವಾಗಿ  ಧಾರವಾಡ ನಗರದಲ್ಲಿ ಅಳವಡಿಸಳಾಗಿದೆ.

 ಶಾಸಕ ಅರವಿಂದ ಬೆಲ್ಲದ್ ಹಾಗೂ ಪ್ರಹ್ಲಾದ್ ಜೋಶಿ ಅವರ ಭಾವಚಿತ್ರ ಇರುವ ಬ್ಯಾನರ್ ನಲ್ಲಿ 'ಶಾಸಕರು ಹಾಗೂ ಸಂಸದರು ತಮ್ಮ ವಿಶೇಷ ಪ್ರಯತ್ನದಿಂದ ಐಐಐಟಿ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹೃತ್ಪೂರ್ವಕ ಸ್ವಾಗತ' ಎಂದು ಬರೆಯಲಾಗಿದೆ‌.

ಇದೀಗ ಈ ಬ್ಯಾನರ್ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, 'ಪ್ರತಿಭಾದೇವಿಸಿಂಗ್ ಪಾಟೀಲ ಅವರು ದೇಶದ ಪ್ರಥಮ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. ಆದರೆ, ದ್ರೌಪದಿ ಮುರ್ಮು ಮೊದಲ ಮಹಿಳಾ ರಾಷ್ಟ್ರಪತಿ ಎಂದು ಬ್ಯಾನರ್ ನಲ್ಲಿ ಅಳವಡಿಸಿ ಇತಿಹಾಸ ತಿರುಚುವ ಕೆಲಸಕ್ಕೆ ಮುಂದಾಗಿದ್ದನ್ನು ನೋಡಿದರೆ, ಅರವಿಂದ ಬೆಲ್ಲದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಸಂದೇಹ ಬರುತ್ತಿದೆ' ಎಂದು ನೆಟ್ಟಿಗರು  ಅಭಿಪ್ರಾಯಿಸಿದ್ದಾರೆ. 

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಗೆ ಸಿಎಂ ಹುದ್ದೆಯೂ ಇಲ್ಲ, ರಾಷ್ಟ್ರಪತಿ ಕಾರ್ಯಕ್ರಮದ ವೇದಿಕೆಯಲ್ಲೂ ಸ್ಥಾನವಿಲ್ಲ: ಕಾಂಗ್ರೆಸ್ ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News