ಕೆಲಸ ಮಾಡದೇ ನಿರ್ಲಕ್ಷ್ಯ ತೋರಿದವರಿಗೆ ಪಕ್ಷದಲ್ಲಿ ಜಾಗವಿಲ್ಲ: ಮುಖಂಡರಿಗೆ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ

Update: 2022-09-26 10:26 GMT

ಬೆಂಗಳೂರು: 'ಪಕ್ಷದ ಕೆಲಸ ಮಾಡದೇ ನಿರ್ಲಕ್ಷ್ಯ ತೋರಿದವರಿಗೆ ಪಕ್ಷದಲ್ಲಿ ಜಾಗವಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ. 

ಪಕ್ಷ ಸಂಘಟನೆ, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಪದಾಧಿಕಾರಿಗಳಾದವರು ಬದ್ಧತೆಯಿಂದ ಕೆಲಸ ಮಾಡಬೇಕು. ಪಕ್ಷದ ಕೆಲಸ ನಿರ್ಲಕ್ಷ್ಯ ಮಾಡುವುದನ್ನು ಸಹಿಸುವುದಿಲ್ಲ. ಇದು ಚುನಾವಣೆ ವರ್ಷ, ಎಲ್ಲರೂ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.

'ಹಳೆ ಮೈಸೂರು ಭಾಗ ಮಾತ್ರವಲ್ಲದೆ, ಉತ್ತರ ಕರ್ನಾಟಕ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಲವಾಗಿದೆ. ಜನರಲ್ಲಿ ನಮ್ಮ ಪಕ್ಷದ ಬಗ್ಗೆ ಬಹಳ ನಂಬಿಕೆ ಇದೆ. ನಮ್ಮ ಪಕ್ಷದಿಂದ ಒಳ್ಳೆಯದಾಗುತ್ತದೆ ಎನ್ನುವ ವಿಶ್ವಾಸ ಜನರಿಗೆ ಇದೆ. ಇದನ್ನು ಮುಖಂಡರು ಅರ್ಥ ಮಾಡಿಕೊಳ್ಳಬೇಕು' ಎಂದು ಹೇಳಿದರು.

'ಪದಾಧಿಕಾರಿಗಳು ಎಲ್ಲರೂ ತಮ್ಮ ಜಿಲ್ಲೆ, ತಾಲೂಕು ಸೇರಿದಂತೆ ಅಗತ್ಯ ಇರುವ ಕಡೆಯೆಲ್ಲಾ ಪ್ರವಾಸ ಮಾಡಬೇಕು. ಮುಂದಿನ ಆರು ತಿಂಗಳು ಸವಾಲಾಗಿ ಸ್ವೀಕಾರ ಮಾಡಿ ಶ್ರಮಿಸಿ ದುಡಿಮೆ ಮಾಡಬೇಕು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣ ಬಲದಿಂದ ಚುನಾವಣೆ ಎದುರಿಸುತ್ತಿವೆ. ಆದರೆ, ನಮ್ಮ ಪಕ್ಷ ಜನ ಬಲದಿಂದ ಚುನಾವಣೆ  ಎದುರಿಸಬೇಕಿದೆ' ಎಂದು ಅವರು ಒತ್ತಿ ಹೇಳಿದರು.

ಹುದ್ದೆಯಿಂದ ಕಿತ್ತು ಹಾಕುತ್ತೇನೆ: ಸಿಎಂ ಇಬ್ರಾಹಿಂ

ಕುಮಾರಸ್ವಾಮಿ ಅವರ ಮಾತಿಗೆ ದನಿಗೂಡಿಸಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು, ಪಕ್ಷದ ಸಂಘಟನೆ, ಕಾರ್ಯಗಳನ್ನು ಅಲಕ್ಷ್ಯ ಮಾಡುವ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಕಿತ್ತು ಹಾಕಲಾಗುವುದು ಎಂದರು.

ಪಕ್ಷದ ಕೆಲಸ ಮಾಡಿ. ಇಲ್ಲವಾದರೆ ಕೆಲಸ ಮಾಡುವವರಿಗೆ ಜಾಗ ಬಿಡಿ. ಪಕ್ಷದ ಕೆಲಸ ಮಾಡಿದವರಿಗೆ ಅವಕಾಶ ಇಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಹಾಗಾಗಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪಕ್ಷ ಸಂಘಟನೆಯಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು ಎಂದರು.

ರಾಜ್ಯ ಪದಾಧಿಕಾರಿಗಳು ಕನಿಷ್ಠ ತಿಂಗಳಿಗೆ ಹದಿನೈದು ದಿನವಾದರೂ ರಾಜ್ಯ ಪ್ರವಾಸ ಮಾಡಬೇಕು. ಜನರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಬೇಕು ಎಂದು ಅವರು ತಾಕೀತು ಮಾಡಿದರು.

ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ; ಯುವ ಜನತಾ ದಳ ಘಟಕವನ್ನು  ಬಲಪಡಿಸುವುದು ಹಾಗೂ ರಾಜ್ಯದ ಉದ್ದಗಲಕ್ಕೂ ಯುವ ಕಾರ್ಯಕರ್ತರನ್ನು ಸಜ್ಜು ಮಾಡಲು ತಕ್ಷಣವೇ ಕ್ರಮ ವಹಿಸಲಾಗುವುದು ಎಂದರು.

ಈಗಾಗಲೇ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಯುವ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಜನತಾ ಜಲಧಾರೆ ಸಮಾವೇಶದಲ್ಲಿ ಯುವ ಪಡೆ ಅದ್ಬುತವಾಗಿ ಕೆಲಸ ಮಾಡಿದ್ದರು. ಮುಂದಿನ ದಿನಗಳಲ್ಲಿಯೂ ನಮ್ಮ ತಂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ ಎಂದು ನಿಖಿಲ್ ಅವರು ಹೇಳಿದರು. 

ಶಾಸಕರಾದ ಸಿ.ಎಸ್.ಪುಟ್ಟರಾಜು, ವೆಂಕಟರಾವ್ ನಾಡಗೌಡ, ಕೆ.ಎಂ.ಕೃಷ್ಣಾರೆಡ್ಡಿ, ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸಚಿವ ಎನ್.ಎಂ.ನಬಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾ ಖಾನ್ ಮುಂತಾದವರು ಹಾಗೂ ಕಾರ್ಯಕಾರಿಣಿಯ ಎಲ್ಲ ಸದಸ್ಯರು, ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News