ಕಡೂರು | ನಿಲ್ಲಿಸಿದ್ದ ಆರೆಸ್ಸೆಸ್ ಕಾರ್ಯಕರ್ತನ ಕಾರಿನ ಮೇಲೆ ಜೀವ ಬೆದರಿಕೆಯ ಬರಹ ಪತ್ತೆ: ದೂರು ದಾಖಲು

Update: 2022-09-26 13:04 GMT

ಚಿಕ್ಕಮಗಳೂರು, ಸೆ.26: ಆರೆಸ್ಸೆಸ್ ಸಂಘಟನೆಯ ಧರ್ಮ ಜಾಗರಣ ಸಮಿತಿಯ ಜಿಲ್ಲಾ ಸಂಯೋಜಕರೊಬ್ಬರ ಕಾರಿನ ಮೇಲೆ ಜೀವ ಬೆದರಿಕೆಯ ಬರಹಗಳು ಪತ್ತೆಯಾಗಿದ್ದು, ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಡೂರು ಪಟ್ಟಣದ ನಿವಾಸಿಯಾಗಿರುವ ಶಶಿಧರ್ ಚಿಂದಿಗೆರೆ ಜಯಣ್ಣ ಎಂಬವರ ಕಾರಿನ ಮೇಲೆ ಕಳೆದ ಶನಿವಾರ ರಾತ್ರಿ ಕಿಡಿಗೇಡಿಗಳು ಅವಾಚ್ಯ ಶಬ್ಧಗಳನ್ನು ಬರೆದು ಜೀವ ಬೆದರಿಕೆಯ ಬರಹ ಗೀಚಿದ್ದಾರೆನ್ನಲಾಗಿದೆ.  

ಶಶಿಧರ್ ಚಿಂದಿಗೆರೆ ಜಯಣ್ಣ ಅವರು ಕಳೆದ ಶನಿವಾರ  ತಮ್ಮ ಮನೆಯ ಮುಂದೆ ಕಾರು ನಿಲ್ಲಿಸಿದ್ದರು. ರಾತ್ರಿ ವೇಳೆ ಕಾರಿನ ಮೇಲೆ ಅಶ್ಲೀಲ ಪದಗಳೊಂದಿಗೆ 'ಕಿಲ್ ಯೂ, ಜಿಹಾದ್' ಎಂಬ ಪದಗಳನ್ನು ಗೀಚಿದ್ದಾರೆ. ರವಿವಾರ ಬೆಳಗ್ಗೆ ಕಾರಿನ ಮೇಲೆ ಗೀಚಿದ್ದ ಬರಹಗಳನ್ನು ಗಮನಿಸಿದ ಜಯಣ್ಣ ಸೋಮವಾರ ಕಡೂರು ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. 


''ಕಾರಿನ ಮೇಲೆ ಜಿಹಾದ್ ಎಂದು ಬರೆದಿರುವುದರಿಂದ ಪ್ರಕರಣಕ್ಕೆ ವಿಶೇಷ ಒತ್ತು ನೀಡಲಾಗಿದ್ದು, ಅವರ ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನು ಬೇರೆಬೇರೆ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದ್ದು, ವೈಯಕ್ತಿಕ ಧ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂದೂ ಹೇಳಲಾಗುತ್ತಿದೆ. ಅಲ್ಲದೇ ಜಯಣ್ಣ ಅವರು ಕಾರು ನಿಲ್ಲಿಸುವ ವಿಚಾರಕ್ಕೂ ಸ್ಥಳೀಯರಲ್ಲಿ ಅಸಮಾಧಾನ ಇತ್ತು. ಜಯಣ್ಣ ಅವರ ಬೆಳವಣಿಗೆ ಸಹಿಸದವರೂ ಹೀಗೆ ಮಾಡಿರುವ ಸಾಧ್ಯತೆ ಇದೆ. ಈ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ''.

- ಉಮಾ ಪ್ರಶಾಂತ್, ಎಸ್ಪಿ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News