ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಡಿಕೆಶಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನಲ್ಲಿ ಕಾಲಾವಕಾಶ ಕೋರಿದ ಸಿಬಿಐ

Update: 2022-09-26 12:54 GMT

ಬೆಂಗಳೂರು, ಸೆ.26: ಆದಾಯ ಮೀರಿ ಆಸ್ತಿ ಗಳಿಕೆ ವಿಚಾರವಾಗಿ ತಮ್ಮ ವಿರುದ್ಧ ದಾಖಲಿಸಲಾದ ಪ್ರಕರಣ ರದ್ದುಪಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿಗೆ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ಸಿಬಿಐ ಹೈಕೋರ್ಟ್‍ನಲ್ಲಿ ಕಾಲಾವಕಾಶ ಕೋರಿದೆ.

ಈ ಸಂಬಂಧ ಡಿಕೆಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಸಿಬಿಐ ಪರ ವಕೀಲರ ಮನವಿಯನ್ನು ಪುರಸ್ಕರಿಸಿ ವಿಚಾರಣೆಯನ್ನು ದಸರಾ ರಜೆಯ ಬಳಿಕ ಮುಂದುವರಿಸಲಾಗುವುದು ಎಂದು ಹೇಳಿದೆ. 

ಅಲ್ಲದೆ, ಅರ್ಜಿದಾರರ ವಿರುದ್ಧ ತನಿಖೆ ಪೂರ್ಣಗೊಂಡಿದೆಯೇ, ಆರೋಪ ಪಟ್ಟಿ ಸಲ್ಲಿಸಲಾಗಿದೆಯಾ  ಎಂದು ನ್ಯಾಯಪೀಠ ಸಿಬಿಐ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವಕೀಲರು ಇನ್ನೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿಧಾರವಾಡ: ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್ ಹಾಕಿ ಪೇಚಿಗೆ ಸಿಲುಕಿದ ಬಿಜೆಪಿ ನಾಯಕರು

ಪ್ರಕರಣವೇನು?: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ಟೋಬರ್ 2020ರಲ್ಲಿ ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣವನ್ನು ಸಿಬಿಐ ದಾಖಲು ಮಾಡಿತ್ತು. ಡಿಕೆಶಿ ಹಾಗೂ ಕುಟುಂಬದ ಸದಸ್ಯರು 74.93 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂಬುವುದು ಸಿಬಿಐ ಮಾಡಿರುವ ಆರೋಪವಾಗಿದೆ. ಅ.5, 2020ರಲ್ಲಿ ಹೊಸದಿಲ್ಲಿ, ಮುಂಬೈ ಸೇರಿದಂತೆ 14 ಸ್ಥಳಗಳಲ್ಲಿ ಸಿಬಿಐ ಏಕಕಾಲಕ್ಕೆ ದಾಳಿ ನಡೆಸಿತ್ತು. ಈ ವೇಳೆ ಕಂಪ್ಯೂಟರ್ ಹಾರ್ಡ್‍ಡಿಸ್ಕ್ ಹಾಗೂ 57 ಲಕ್ಷ ನಗದು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಬಳಿಕ ಜಾರಿ ನಿರ್ದೇಶನಾಲಯವು (ಈಡಿ) ಡಿಕೆಶಿ ವಿರುದ್ಧ ಆಸ್ತಿ ಗಳಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿತ್ತು. ಈ ಸಂಬಂಧ ಡಿ.ಕೆ.ಶಿವಕುಮಾರ್ ಹಲವು ಬಾರಿ ಹೊಸದಿಲ್ಲಿಯ ಈಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದರು. ಅಷ್ಟೇ ಅಲ್ಲದೆ, ಜೈಲಿಗೂ ಹೋಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News