ನಾನು ಸಿದ್ದರಾಮಯ್ಯರಷ್ಟು ಬುದ್ಧಿವಂತನಲ್ಲ, ಆದರೆ ವಿಚಾರ ಮಾಡಿಯೇ ಮಾತನಾಡುತ್ತೇನೆ: ಸಚಿವ ಸುಧಾಕರ್

Update: 2022-09-26 13:55 GMT

ಬೆಂಗಳೂರು, ಸೆ.26: ಕಾಂಗ್ರೆಸ್ ಪ್ರಬಲ ಸಮುದಾಯದ ವಿರುದ್ಧ ನಿಂತಿದೆ ಎಂಬುದು ಇತಿಹಾಸದಿಂದಲೇ ತಿಳಿದುಬರುತ್ತದೆ. ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕಿಳಿಸಿದ ನಾಯಕರ ಪಟ್ಟಿಯನ್ನೆ ನಾನು ನೀಡಿದ್ದೇನೆ. ಇದರ ಬಗ್ಗೆ ಕಾಂಗ್ರೆಸ್ ಮೊದಲು ಉತ್ತರ ನೀಡಲಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಷ್ಟು ನಾನು ಬುದ್ಧಿವಂತನಲ್ಲ. ಆದರೆ, ಇತಿಹಾಸವನ್ನು ಅಧ್ಯಯನ ಮಾಡಿದ್ದು, ವಿಚಾರ ಮಾಡಿಯೇ ಮಾತನಾಡುತ್ತೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಮ್ಮು ಕಾಶ್ಮೀರದಲ್ಲಿ ಶಾಂತಿಯುತವಾಗಿ ಚುನಾವಣೆ ಮಾಡಿಸಿದ್ದರು ಎಂದರು.

ಈಶಾನ್ಯ ರಾಜ್ಯಗಳಿಗೆ ಅಂದಿನ ಕಾಲದಲ್ಲೇ ಒಂದೇ ಬಾರಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ಅಂತಹವರನ್ನೇ ಪ್ರಧಾನಿ ಸ್ಥಾನದಿಂದ ಕಾಂಗ್ರೆಸ್‍ನವರು ಕೆಳಕ್ಕಿಳಿಸಿದರು. ಆದರೆ ಕಾಂಗ್ರೆಸ್ ಈವರೆಗೆ ಇದಕ್ಕೆ ಉತ್ತರ ನೀಡಿಲ್ಲ. ಪಿ.ವಿ.ನರಸಿಂಹರಾವ್, ರಾಜಶೇಖರಮೂರ್ತಿ, ಎಸ್.ನಿಜಲಿಂಗಪ್ಪ, ಎಸ್.ಎಂ.ಕೃಷ್ಣ ಮೊದಲಾದ ನಾಯಕರಿಗೆ ಕಾಂಗ್ರೆಸ್ ಏನು ಮಾಡಿದೆ ಎಂಬ ಪಟ್ಟಿಯೇ ಇದೆ. ನಾನು ಹೇಳಿರುವುದಕ್ಕೆ ಕಾಂಗ್ರೆಸ್ ಮೊದಲು ಉತ್ತರ ನೀಡಲಿ ಎಂದು ಅವರು ಸವಾಲು ಹಾಕಿದರು.

ಬಿಜೆಪಿಯು ಎಲ್ಲರಿಗೂ ಸ್ಥಾನಮಾನ ನೀಡಿದೆ. ಜಗದೀಶ ಶೆಟ್ಟರ್ ಅವರಿಗೂ ಸಿಎಂ ಸ್ಥಾನ ನೀಡಲಾಗಿತ್ತು. ಬಸವರಾಜ ಬೊಮ್ಮಾಯಿ ಅವರಿಗೂ ಉತ್ತಮ ಸ್ಥಾನ ನೀಡಲಾಗಿದೆ. ಬಿಜೆಪಿಯಲ್ಲಿ ಜಾತಿ ನೋಡಿ ಮಣೆ ಹಾಕುವುದಿಲ್ಲ. ಯಾವುದೇ ಜಾತಿಯನ್ನು ಟಾರ್ಗೆಟ್ ಕೂಡ ಮಾಡುವುದಿಲ್ಲ ಎಂದು ಸುಧಾಕರ್ ತಿಳಿಸಿದರು.

ಭ್ರಷ್ಟಾಚಾರಕ್ಕೂ ಜಾತಿಗೂ ಸಂಬಂಧವಿಲ್ಲ: ಭ್ರಷ್ಟಾಚಾರಕ್ಕೂ ಜಾತಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸತ್ಯ. ಆದರೆ, ಪ್ರಬಲ ಸಮುದಾಯದ ಮುಖ್ಯಮಂತ್ರಿ ಇದ್ದಾಗ, ಅವರನ್ನು ವಿಶೇಷವಾಗಿ ಟಾರ್ಗೆಟ್ ಮಾಡುವುದು ಕಾಂಗ್ರೆಸ್‍ನ ಸಂಪ್ರದಾಯ. ಕಾಂಗ್ರೆಸ್ ಸದಾ ಪ್ರಬಲ ಸಮುದಾಯದ ವಿರುದ್ಧ ನಿಂತಿದೆ. ಯಾವ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ತಪ್ಪಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೇಳಬೇಕು. ಅವರು ಸಮರ್ಥ ಆಡಳಿತ ನೀಡುತ್ತಿರುವುದರಿಂದಲೇ ತಮಗೆ ಉಳಿಗಾಲ ಇಲ್ಲ ಎಂಬುದು ಕಾಂಗ್ರೆಸ್‍ಗೆ ಅರ್ಥವಾಗಿದೆ ಎಂದು ಅವರು ಹೇಳಿದರು.

ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾದಾಗ ಕೆಲವೇ ಗಂಟೆಗಳಲ್ಲಿ ಸಮಸ್ಯೆ ಸರಿಪಡಿಸಲಾಗಿದೆ. ಇಂತಹ ತ್ವರಿತ ಕಾರ್ಯವನ್ನು ‘ತಳ್ಳುವ ಸರಕಾರ’ ಮಾಡುತ್ತದೆಯೇ ಅಥವಾ ‘ಸರ್ವಶಕ್ತ ಕ್ರಿಯಾಶೀಲ ಸರಕಾರ’ ಮಾಡುತ್ತದೆಯೇ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರೇ ವಿಚಾರ ಮಾಡಬೇಕು ಎಂದು ಸುಧಾಕರ್ ತಿರುಗೇಟು ನೀಡಿದರು.

ಮಾಜಿ ಪ್ರಧಾನಿ ಭೇಟಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪದ್ಮನಾಭ ನಗರದಲ್ಲಿರುವ ಅವರ ನಿವಾಸದಲ್ಲಿ ಸಚಿವ ಡಾ.ಕೆ.ಸುಧಾಕರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News