ಎಸ್‍ಡಿಪಿಐ ಮುಸ್ಲಿಮರ ಪಕ್ಷವಲ್ಲ: ದೇವನೂರ ಪುಟ್ಟನಂಜಯ್ಯ

Update: 2022-09-26 19:13 GMT

ಬೆಂಗಳೂರು, ಸೆ. 26: ಎಸ್‍ಡಿಪಿಐ ಮುಸ್ಲಿಮರ ಪಕ್ಷವಲ್ಲ. ಇಲ್ಲಿ ಹಿಂದೂಗಳು ಸೇರಿದಂತೆ ಎಲ್ಲ ವವರ್ಗದ ಜನರಿದ್ದಾರೆ. ಆದರೂ, ಉದ್ದೇಶ ಪೂರಕವಾಗಿ ಮುಸ್ಲಿಮರ ಪಕ್ಷವೆಂದು ಬಿಂಬಿಸಲಾಗುತ್ತಿದೆ ಎಂದು ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರ ಪುಟ್ಟನಂಜಯ್ಯ ಬೇಸರ ವ್ಯಕ್ತಪಡಿಸಿದರು.

ಇತ್ತೀಚಿಗೆ ಪಿಎಫ್‍ಐ ಹಾಗೂ ಎಸ್‍ಡಿಪಿಐ ಕಚೇರಿ ಮತ್ತು ನಾಯಕರ ಮನೆ ಮೇಲೆ ನಡೆದ ಎನ್‍ಐಎ ದಾಳಿ ಖಂಡಿಸಿ ಸೋಮವಾರ ನಗರದ ಎಸ್‍ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‍ಡಿಪಿಐ ಹುಟ್ಟುಹಾಕಿದ್ದು ಮುಸ್ಲಿಮರೇ ಇರಬಹುದು. ಆದರೆ, ಇಲ್ಲಿನ ಹಿಂದೂಗಳು ಸೇರಿದಂತೆ ಎಲ್ಲರಿಗೂ ಅವಕಾಶ ಇದೆ. ಪ್ರಜಾಪ್ರಭುತ್ವ ಮೇಲೆ ಅಪಾರ ನಂಬಿಕೆ ಇಡಲಾಗಿದೆ ಎಂದರು. 

ನಾನು ನಿವೃತ್ತ ಡಿಡಿಪಿಐ, ಈ ಪಕ್ಷದೊಳಗೆ ಯಾರೂ ಬೇಕಾದರೆ ರಾಜ್ಯಾಧ್ಯಕ್ಷ ಆಗಬಹುದು. ದೇಶವನ್ನು ಭಯ ಮತ್ತು ಹಸಿವು ಮುಕ್ತ ಮಾಡುವುದೇ ನಮ್ಮ ಪಕ್ಷದ ಪ್ರಮುಖ ಗುರಿಯಾಗಿದೆ ಎಂದ ಅವರು, ಎಸ್‍ಡಿಪಿಐ ಮತ್ತು ಪಿಎಫ್‍ಐ ಎಂದೂ ಸಹ ಧರ್ಮಕ್ಕಾಗಿ ಹೋರಾಟ ಮಾಡಿಲ್ಲ.ಬದಲಾಗಿ, ರಾಷ್ಟ್ರ ಕಟ್ಟುವ, ಜೋಡಿಸುವ ಕಾಯಕದಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದರು. 

ಬಿಜೆಪಿಯವರು ಹಿಂದೂ ರಾಷ್ಟ್ರ ಮಾಡುತ್ತಿಲ್ಲ. ಬದಲಿಗೆ ಬ್ರಾಹ್ಮಣ್ಯ ರಾಷ್ಟ್ರ ಮಾಡುತ್ತಿದ್ದಾರೆ. ಹಿಂದೂ ಹೆಸರಿನಲ್ಲಿ ಯುವಕರನ್ನು ಎತ್ತುಕಟ್ಟುತ್ತಾರೆ. ಅಲ್ಲದೆ, ಸಂಘಪರಿವಾರ ಪ್ರಮುಖ ನಾಯಕರ ಮಕ್ಕಳು ಯಾರೋ ಸಹ ಇಂತಹ ಚಟುವಟಿಕೆಗಳಲ್ಲಿ ಇಲ್ಲ. ಬಡವರ ಮತ್ತು ಶೋಷಿತ ವರ್ಗದವರನ್ನು ಬಳಕೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, ಆರೆಸ್ಸೆಸ್ ನಾಯಕರು ಹಲವಾರು ಆಯುಧ ಇಟ್ಟಿದ್ದು, ಬಡವರ ಮಕ್ಕಳ ಕೈಗೆ ಆಯುಧ ಕೊಟ್ಟಿದ್ದಾರೆ. ಎಸ್‍ಡಿಪಿಐ ಒಂದೇ ಒಂದು ದೇಶ ವಿರೋಧಿ ಕೆಲಸ ಮಾಡಿಲ್ಲ. ಆದರೂ ಎನ್‍ಐಎ ಅಧಿಕಾರಿಗಳು ಕಚೇರಿ ಬೀಗ ಒಡೆದು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.

ಎಸ್‍ಡಿಪಿಐ ಶೇ.98ರಷ್ಟು ಪ್ರಕರಣಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ಆದರೆ, ಆರೆಸ್ಸೆಸ್ ಬಾಂಬ್ ಸ್ಫೋಟದ ಕೆಲಸ ಮಾಡಿದೆ. ಆರೆಸ್ಸೆಸ್ ಮಲೆಗಾಂವ್ ಸ್ಫೋಟ ಸೇರಿದಂತೆ ಹಲವು ಸ್ಫೋಟ ಮಾಡಿದೆ ಎಂದ ಅವರು, ಎಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ವಿರೋಧಿಗಳನ್ನು ಹಣಿಯುತ್ತಿದೆ. ಬಿಜೆಪಿಗೆ ಕಾಂಗ್ರೆಸ್ ಕೂಡ ಸಹಾಯ ಮಾಡುತ್ತಿದೆ ಎಂದು ಅವರು ದೂರಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News