ಮೈಸೂರು ದಸರಾ | ಕವಿಗೋಷ್ಠಿಗೆ ಮೃತಪಟ್ಟ ಕವಿಯ ಹೆಸರು!: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

Update: 2022-09-27 09:35 GMT

ಮೈಸೂರು, ಸೆ.27: ಕೆಲ ದಿನಗಳ ಹಿಂದೆ ನಾಡಿನ ನಾನಾ ಟ್ರಸ್ಟ್ ಗಳಿಗೆ ನೇಮಕ ಮಾಡುವಾಗ ಕಳೆದ ವರ್ಷ ಮೃತಪಟ್ಟಿದ್ದ ರಾಜೇಶ್ವರಿ ತೇಜಸ್ವಿ ಅವರನ್ನೂ ನೇಮಿಸಿ ಎಡವಟ್ಟು ಮಾಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ದಸರಾ ಮುಖ್ಯ ಕವಿಗೋಷ್ಠಿಗೆ ಮೃತಪಟ್ಟ ಕವಿಯೊಬ್ಬರ ಹೆಸರನ್ನು ಸೆರಿಸಿ ಮತ್ತೊಂದು ಮಹಾ ಎಡವಟ್ಟು ಮಾಡಿದೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ತೀವ್ರ ಟ್ರೋಲ್ ಗೆ ಒಳಗಾಗಿದೆ.

ದಸರಾ ಪ್ರಯುಕ್ತ ಅಕ್ಟೋಬರ್ 3ರಂದು ಮೈಸೂರು ವಿವಿಯ ಸೆನೆಟ್ ಸಭಾಂಗಣದಲ್ಲಿ ಪ್ರಧಾನ ಕವಿಗೋಷ್ಠಿ ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸುವ 37 ಕವಿಗಳಲ್ಲಿ ಮೂರು ವರ್ಷಗಳ ಹಿಂದೆಯೇ ಮೃತಪಟ್ಟ ಹಿರಿಯ ಕವಿ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಜಿ.ಕೆ.ರವೀಂದ್ರ ಕುಮಾರ್ ಅವರ ಹೆಸರು ಕೂಡಾ ಇದೆ! ಇದು ಆಹ್ವಾನ ಪತ್ರಿಕೆಯಲ್ಲೂ ಮುದ್ರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಹಿರಿಯ ಪತ್ರಕರ್ತ, ಲೇಖಕ ಗಿರೀಶ್ ರಾವ್ ಹತ್ವಾರ್(ಜೋಗಿ) ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ "ನಾಡಿದ್ದು ದಸರಾ ಕವಿಗೋಷ್ಠಿಯಲ್ಲಿ ಕವಿತೆ ಓದಲಿರುವ ಕವಿಗಳ ಪಟ್ಟಿಯಲ್ಲಿರುವ ಜಿಕೆ ರವೀಂದ್ರ ಕುಮಾರ್ ಯಾರು? ಕನ್ನಡದ ಅತ್ಯುತ್ತಮ ಕವಿ ಅವರು. ಅವರು ಈಗಿಲ್ಲ. ಕಣ್ಮರೆ ಅದವರನ್ನು ಎಲ್ಲರೂ ಮರೆಯುತ್ತಾರೆ. ಆದರೆ ಸರಕಾರ ಮರೆಯುವುದಿಲ್ಲ. ದತ್ತಿ ಸಂಸ್ಥೆ ಸದಸ್ಯರನ್ನೂ ಮಾಡುತ್ತದೆ. ಕವಿ ಗೋಷ್ಠಿಗೆ ಕರೆಯುತ್ತದೆ. ಅಯ್ಯೋ ಸುನೀಲ್. ಈರೆನ ಗತಿಯೇ!" ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ವ್ಯಂಗ್ಯವಾಡಿದ್ದಾರೆ.

"ಮೃತರಿಂದ ಕವಿತೆ ಓದಿಸುವುದೇ ಆಗಿದ್ದರೆ ಪಂಪ, ರನ್ನ, ಕುಮಾರವ್ಯಾಸರೂ ಬರಬಹುದಿತ್ತು!" ಎಂದು ಹಿರಿಯ ಪತ್ರಕರ್ತ ರಾಜರಾಮ ತಲ್ಲೂರು ಫೇಸ್ ಬುಕ್ ನಲ್ಲಿ ಟೀಕಿಸಿದ್ದಾರೆ. ಈ ರೀತಿ ತೀವ್ರ ಟೀಕೆ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ದಸರಾ ಕವಿಗೋಷ್ಠಿ ಉಪ ಸಮಿತಿ ಅವರ ಹೆಸರು ಬದಲಿಸಿ ಹೊಸ ಆಹ್ವಾನ ಪತ್ರಿಕೆ ಮುದ್ರಿಸಿ ರವಾನಿಸಿದೆ.

ಈ ನಡುವೆ ಮುಖ್ಯ ಕವಿಗೋಷ್ಠಿಗೆ ಕೆಲವರನ್ನು ಆಯ್ಕೆ ಮಾಡಿರುವುದು ಕೂಡಾ ಚರ್ಚೆಗೆ ಕಾರಣವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಅಕಾಡಮಿ ಸ್ಥಾನದಿಂದ ಬದಲಾಯಿಸಿದವರನ್ನು ಕವಿಗೋಷ್ಠಿಗೆ ಹಾಕಲಾಗಿದೆ. ಕೆಲವರ ಹೆಸರನ್ನು ತಪ್ಪಾಗಿ ಮುದ್ರಿಸಲಾಗಿದೆ. ಕವಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆಯವರು ಹೆಸರು ಎಚ್.ಎಂ.ನಾಗರಾಜರಾವ್ 'ಕಲ್ಕತ್ತೆ' ಎಂದು ಮುದ್ರಿತವಾಗಿದೆ.

2007ರಲ್ಲೂ ಕವಿಗೋಷ್ಠಿಗೆ ಆಯ್ಕೆ ಮಾಡುವಾಗ ಹೀಗೆಯೇ ಎಡವಟ್ಟು ಮಾಡಿ ಇಡೀ ಕವಿಗೋಷ್ಠಿಯೇ ಮಹತ್ವವನ್ನು ಕಳೆದುಕೊಂಡಿತ್ತು. ಆನಂತರ ಎಚ್ಚೆತ್ತ ಸರಕಾರ ಕವಿಗೋಷ್ಠಿ ಉಪಸಮಿತಿಗೆ ಅರ್ಹರು ಹಾಗೂ ಅನುಭವಿಗಳನ್ನು ನೇಮಿಸಿ ಸರಿಪಡಿಸಿತ್ತು. ಮತ್ತೆ ಈ ಬಾರಿ ಕವಿಗಳ ಆಯ್ಕೆಯಲ್ಲಿ ಆಗಿರುವ ಎಡವಟ್ಟು ಕವಿಗೋಷ್ಠಿ ಮತ್ತೆ ಹಳೆ ಹಾದಿ ಹಿಡಿಯಲಿದೆಯೇ ಎನ್ನುವ ಚರ್ಚೆಯನ್ನು ಹುಟ್ಟುಹಾಕಿದೆ.


ಚಾಮರಾಜನಗರ ಸಂಸದರಾದ ಪ್ರತಾಪ್ ಸಿಂಹ!

ಇದಲ್ಲದೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಕವಿಗೋಷ್ಠಿ ಸಮಿತಿಯವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಭಾರೀ ಎಡವಟ್ಟು ಮಾಡಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News