ಮುಂದುವರಿದ ಪೇಸಿಎಂ ಅಭಿಯಾನ: ಮಂಡ್ಯದಲ್ಲಿ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು

Update: 2022-09-27 13:41 GMT

ಮಂಡ್ಯ, ಸೆ.27: ಗುತ್ತಿಗೆ ಬಿಲ್‍ನಲ್ಲಿ 40 ಪರ್ಸೆಂಟ್ ಕಮಿಷನ್ ಪಡೆದಿರುವ ಆರೋಪಕ್ಕೆ ಸಂಬಂಧಿಸಿ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಆರಂಭಿಸಿದ್ದ ಪೇಸಿಎಂ ಅಭಿಯಾನ ಮಂಡ್ಯಕ್ಕೂವಿಸ್ತರಣೆಯಾಗಿದೆ. ಮಂಗಳವಾರ ನಗರದಲ್ಲೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪೇಸಿಎಂ ಅಭಿಯಾನ ನಡೆಸಿ ಪ್ರತಿಭಟಿಸಿದರು.

ನಗರದ ಕುರುಬರ ಹಾಸ್ಟೆಲ್ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಪೇಸಿಎಂ ಪೋಸ್ಟರ್ ಹಿಡಿದು ಮೆರವಣಿಗೆ ನಡೆಸಿದರು.  ಪ್ರಮುಖ ಬೀದಿಗಳ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪೋಸ್ಟರ್ ಅಂಟಿಸುವುದಕ್ಕೆ ಪೊಲೀಸರು ತಡೆಯೊಡ್ಡಲು ಯತ್ನಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.

ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್ ಮಾತನಾಡಿ, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನಿರಂತರವಾಗಿ ಹಗರಣಗಳು ನಡೆಯುತ್ತಿವೆ. ಇದನ್ನೂ ಕಂಡೂ ಕಾಣದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ನ್ಯಾಯಕ್ಕಾಗಿ ಪೇಸಿಎಂ ಅಭಿಯಾನ ಆರಂಭಿಸಿದ್ದೇವೆ. ಇದನ್ನು ಪೊಲೀಸರು ಅರ್ಥಮಾಡಿಕೊಳ್ಳಬೇಕು. ಕೋವಿಡ್, ಅತಿವೃಷ್ಟಿ ಸಂದರ್ಭದಲ್ಲಿ ದೋಚಿದವರೆಲ್ಲಾ ಸಚಿವರಾಗಿದ್ದಾರೆ. ಅಶೋಕ್, ಅಶ್ವತ್‍ನಾರಾಯಣ್ ಸೇರಿದಂತೆ ಪ್ರಮುಖರು ಲೂಟಿ ಮಾಡುವುದನ್ನೂ ಇನ್ನೂ ಬಿಟ್ಟಿಲ್ಲ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ನಗರಸಭೆ ಸದಸ್ಯ ರಾಮಲಿಂಗಣ್ಣ,  ಮಾಜಿ ಸದಸ್ಯ ಮಂಜುನಾಥ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್, ಚಂದ್ರು, ಪ್ರಸನ್ನ, ಗುಣವಂತ, ನಿರಂಜನ್, ರಮೇಶ್ ಸೇರಿದಂತೆ ಹಲವು ಮುಖಂಡರು ಅಭಿಯಾನದಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News