15 ಸಾವಿರ ಶಿಕ್ಷಕರ ನೇಮಕಾತಿ: 1:2 ಅಭ್ಯರ್ಥಿಗಳ ಪಟ್ಟಿ ಪ್ರಕಟ

Update: 2022-09-27 15:36 GMT

ಬೆಂಗಳೂರು, ಸೆ.27: ರಾಜ್ಯ ಸರಕಾರವು ಹೊರಡಿಸಿದ್ದ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 1:2 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಸಿದ್ಧಗೊಂಡಿದ್ದು, ಬೆಂಗಳೂರು ವಿಭಾಗದ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.

ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು ಕ್ರಮವಾಗಿ ಬುಧವಾರ ಮತ್ತು ಗುರುವಾರ ಸಂಜೆ ನಂತರ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟ್ವೀಟ್ ಮಾಡಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಶಿಕ್ಷಕರ ನೇಮಕಾತಿಗಾಗಿ ಆನ್‍ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಮೇ 21 ಮತ್ತು 22 ರಂದು ಶಿಕ್ಷಕರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 1,00,683 ಅಭ್ಯರ್ಥಿಗಳು ಹಾಜರಾಗಿದ್ದರು. ಆ.17ರಂದು ಅಂಕಗಳನ್ನು ಇಲಾಖೆಯ ವೆಬ್‍ಸೈಟ್ https//schooleducation.kar.nic.in ನಲ್ಲಿ ಪ್ರಕಟಿಸಲಾಗಿತ್ತು.

ವೈಯಕ್ತಿಕ ವಿವವರಗಳ ತಿದ್ದುಪಡಿಗಾಗಿ ಆ.18ರಿಂದ ಆ.24ರವರೆಗೆ ದೃಢೀಕೃತ ದಾಖಲೆಗಳೊಂದಿಗೆ ಖುದ್ದಾಗಿ ಕಚೇರಿಗೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಈಗ 1:2 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ, ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರು ಹಾಗೂ ನೇಮಕಾತಿ ಪ್ರಾಧಿಕಾರ ಕಚೇರಿಯಲ್ಲಿ ತಮ್ಮ ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಿದೆ. ವೇಳಾಪಟ್ಟಿಯನ್ನು ಸೆ.30ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಉತ್ತರಪತ್ರಿಕೆಗಳಲ್ಲಿ ತಮ್ಮ ವೈಯಕ್ತಿಕ ಗುರುತುಗಳನ್ನು ಬಹಿರಂಗಪಡಿಸಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಇನ್ನಿತರ ಕಾರಣಗಳಿಗಾಗಿ 60 ಅಭ್ಯರ್ಥಿಗಳನ್ನು 1:2 ಅನುಪಾತ ಪಟ್ಟಿಗೆ ಪರಿಗಣಿಸದೆ ಕೈಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News