ಜೈಲುಪಾಲಾದ ಎರಡೇ ಗಂಟೆಯಲ್ಲಿ ಜಾಮೀನು ಪಡೆದ ಬಿಜೆಪಿ ಸಚಿವ‌ ಕಪಿಲ್‌ದೇವ್ ಅಗರ್‍ವಾಲ್, ಶಾಸಕ ವಿಕ್ರಮ್ ಸೈನಿ !

Update: 2022-09-28 05:50 GMT

ಮುಝಫ್ಫರ್ ನಗರ: ಉತ್ತರ ಪ್ರದೇಶದ ವೃತ್ತಿ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಕಪಿಲ್‍ ದೇವ್ ಅಗರ್‍ವಾಲ್ ಹಾಗೂ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಹಾಗೂ ಹಲವು ಮಂದಿ ಇತರ ಆರೋಪಿಗಳು 2013ರ ಮುಝಫ್ಫರ್ ನಗರ ದೊಂಬಿ ಪ್ರಕರಣದಲ್ಲಿ ಮಂಗಳವಾರ ನ್ಯಾಯಾಲಯಕ್ಕೆ ಶರಣಾದರು. ಆದರೆ ಜೈಲುಪಾಲಾದ ಎರಡೇ ಗಂಟೆಗಳಲ್ಲಿ ಆರೋಪಿಗಳು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2013ರ ಆಗಸ್ಟ್ 31ರಂದು ನಗ್ಲಾ ಮಂದೌರ್ ಎಂಬಲ್ಲಿ ಅನುಮತಿ ಇಲ್ಲದೇ ಪಂಚಾಯ್ತಿ ಆಯೋಜಿಸಿದ ಆರೋಪದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಅಕ್ರಮ ಸಭೆ ಕೋಮುಗಲಭೆಗೆ ಕಾರಣವಾಗಿತ್ತು ಎಂದು ಆಪಾದಿಸಲಾಗಿತ್ತು. ಗಲಭೆಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟು, 50 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದರು. ಸ್ಥಳೀಯ ನ್ಯಾಯಾಲಯ ಆರೋಪಿಗಳ ವಿರುದ್ಧ ಸಮನ್ಸ್ ನೀಡಿತ್ತು ಹಾಗೂ ಜಾಮೀನು ನೀಡಬಹುದಾದ ವಾರೆಂಟ್ ಹೊರಡಿಸಿತ್ತು. ಆದಾಗ್ಯೂ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.

ಮಂಗಳವಾರ ಆರೋಪಿಗಳು ಮ್ಯಾಜಿಸ್ಟ್ರೇಟ್ ಮುಂದೆ ಶರಣಾದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತು. ಕಸ್ಟಡಿಯಲ್ಲಿ ಎರಡು ಗಂಟೆ ಕಳೆದ ಅವರಿಗೆ ಬಳಿಕ ಜಾಮೀನು ನೀಡಲಾಯಿತು.

"ಆರೋಪಿಗಳ ವಿರುದ್ಧ ಸೆಕ್ಷನ್ 144 ಉಲ್ಲಂಘಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದು ಜಾಮೀನು ನೀಡಬಹುದಾದ ಪ್ರಕರಣ. ಸಮನ್ಸ್ ಹಾಗೂ ವಾರೆಂಟ್ ನೀಡಿದರೂ ಆರೋಪಿಗಳು ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು" ಎಂದು ಜಿಲ್ಲಾ ಸರ್ಕಾರಿ ವಕೀಲ ರಾಜೀವ್ ಶರ್ಮಾ ಹೇಳಿದ್ದಾರೆ.

ಜಾಮೀನು ಪಡೆದ ಬಳಿಕ ಅಖಿಲೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್‍ ದೇವ್ ಅಗರ್‍ವಾಲ್, "ಅವರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ದೊಂಬಿ ನಡೆದದ್ದು ಅವರ ಸರ್ಕಾರದ ವೈಫಲ್ಯದಿಂದಾಗಿ. ಅದನ್ನು ಮುಚ್ಚಿಹಾಕಲು ಬಿಜೆಪಿ ಸದಸ್ಯರನ್ನು ಸಿಲುಕಿಸಲಾಗಿದೆ" ಎಂದು ಆಪಾದಿಸಿದರು. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News