ವರ್ಗ ರಹಿತ, ವರ್ಣರಹಿತ ಸಮಾಜ ಕಟ್ಟಬೇಕಿದೆ: ಸಾಹಿತಿ ಡಾ.ದೊಡ್ಡರಂಗೇಗೌಡ

Update: 2022-09-28 11:20 GMT

ಮೈಸೂರು,ಸೆ.28: ರಾಜ್ಯದಲ್ಲಿ ಕೆಟ್ಟು ಹೋಗಿರುವ ಕನ್ನಡ ಭಾಷೆಯನ್ನು ಪುನರ್ ನವೀಕರಣ ಮಾಡಬೇಕಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ, ಕವಿ ಹಾಗೂ  ಸಾಹಿತಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಿಸಿದರು.

ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ದಸರಾ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕನ್ನಡ ನಾಡು ನುಡಿ ಕುರಿತು ಮಾತನಾಡಿದ ಅವರು,  ರಾಜ್ಯದಲ್ಲಿ ಕೆಟ್ಟು ಹೋಗಿರುವ ಕನ್ನಡ ಭಾಷೆಯನ್ನು ಪುನರ್ ನವೀಕರಣ ಮಾಡಬೇಕಿದೆ‌. ಈ ನಿಟ್ಟಿನಲ್ಲಿ ಸೂರ್ಯ ಚಂದ್ರ ಇರುವವರೆಗೂ ಕನ್ನಡ ಭಾಷೆಯೂ ಇರಲಿದ್ದು, ಈ ಭಾಷೆಗೆ ಕವಿಗಳಿಂದಲೇ ಭದ್ರ ಬುನಾದಿ ಹಾಕುವಂತಹ ಕಾರ್ಯಕ್ಕೆ ಸ್ಪಷ್ಟ ಕಾಯಕಲ್ಪ ಮಾಡಬೇಕಿದೆ. ಆ ಮೂಲಕ ವೀರವಂತಿಕೆ ತುಂಬುವ, ನಿಜವಾದ ಶಕ್ತಿ ಯಾವುದೆಂದು ಹೇಳುವಂತಹ ಕವಿಗಳು ಹುಟ್ಟಿ ಬರಬೇಕಿದೆ ಎಂದು ಹೇಳಿದರು.

ಸಮಾಜದ ಶುದ್ಧೀಕರಣದೊಂದಿಗೆ, ಮನಸ್ಸಿನ ಶುದ್ಧೀಕರಣವೂ  ಆಗಬೇಕಿದ್ದು, ಬೇಧ-ಭಾವ, ಪಕ್ಷಪಾತಗಳನ್ನು ಮೂಲದಿಂದಲೇ ಉಚ್ಛಾಟನೆ ಮಾಡುವುದು ಅನಿವಾರ್ಯವಾಗಿದೆ. ವರ್ಗ ರಹಿತ, ವರ್ಣರಹಿತ ಸಮಾಜ ಕಟ್ಟಬೇಕಿದೆ. ಅನೀತಿಯೇ ನೀತಿಯಾಗಿರುವ, ಅಕ್ರಮಗಳೇ ಕ್ರಮಗಳಾಗಿರುವ ಇಂತಹ ಸಂದರ್ಭದಲ್ಲಿ ಅಪ್ರಮಾಣಿಕತೆಯಂತಹ ಹಲವಾರು ಅಂಶಗಳನ್ನು ತೊಡೆದು ಹಾಕಿ ಆದರ್ಶ ಸಮಾಜ ನಿರ್ಮಾಣದತ್ತ ಮುಂದಾಗಬೇಕಿದೆ‌. ಇದಕ್ಕೆ ಕವಿಗಳು ಮೊದಲ ಮುನ್ನುಡಿ ಬರೆಯಬೇಕಿದೆ‌ ಎಂದರು.

ಇದಕ್ಕೂ ಮೊದಲು ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾದ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ.ಸೋಮಶೇಖರ್  ಉದ್ಘಾಟಿಸಿದರು.

ಬಳಿಕ ಮಾತನಾಡಿದ  ಅವರು, ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಿಂದ ಖ್ಯಾತ ಕವಿಗಳು ತಮ್ಮ ಕವಿತೆ ವಾಚಿಸಲು ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಗೋಷ್ಠಿಗೆ ಆಗಮಿಸಿರುವ ಕವಿಗಳಿಂದ ಉತ್ತಮವಾದ ಕವನ ಹಾಗೂ ಕವಿತೆಗಳು ಹೊರಬರುವುದರ ಮೂಲಕ ನೆರೆದಿರುವ ಸಭಿಕರನ್ನು ರಂಜಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರಾದ ಡಾ.ಬಗಾದಿ ಗೌತಮ್,  ಉಪಮಹಾಪೌರರಾದ ರೂಪಾ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕವಿ ಪ್ರೊ.ಕೃಷ್ಣೇಗೌಡ,  ಖ್ಯಾತ ಹಾಸ್ಯ ಕವಿಗಳಾದ ಬಿ.ಆರ್‌.ಲಕ್ಷ್ಮಣರಾವ್,  ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿ ಡಾ. ಎಂ.‌ದಾಸೇಗೌಡ, ಕಾರ್ಯಾಧ್ಯಕ್ಷರಾದ ಡಾ. ಎಂ.ಜಿ. ಮಂಜುನಾಥ್,  ಕಾರ್ಯದರ್ಶಿ ಹೆಚ್.ಡಿ.ಗಿರೀಶ್ ಸೇರಿದಂತೆ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಕೃತಿ ಬಹಳ ಬೇಗ ಹಾಳು ಮಾಡುತ್ತಿರುವ ಕಾಸ್ಮೋ‌ಪಾಲಿಟನ್ ನಗರಗಳಿಗಿಂತ ಇಲ್ಲಿನ ಮೂಲ ಸಂಸ್ಕ್ರತಿಯನ್ನು ಉಳಿಸಿ, ಬೆಳೆಸಿ‌ ಕಾಪಾಡಿಕೊಂಡು ಹೋಗುತ್ತಿರುವ ಮೈಸೂರು   ಹಲವಾರು ವಿಶೇಷಗಳನ್ನು ಒಳಗೊಂಡಿದ್ದು, ರಾಯಲ್ ಸಿಟಿಯೆಂದು ಕರೆಯಲು ಹೆಮ್ಮೆಯಾಗುತ್ತದೆ ಎಂದರು.

-ಪ್ರೊ.ಕೃಷ್ಣೇಗೌಡ, ವಿಶ್ರಾಂತ ಪ್ರಾಧ್ಯಾಪಕ ಹಾಗು ಕವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News