ಮಮತಾ ಬ್ಯಾನರ್ಜಿ ವಿರುದ್ಧ ನಿಂದನಾತ್ಮಕ ಮೀಮ್ಸ್: ಯೂಟ್ಯೂಬರ್ ಬಂಧನ, 6 ಮಂದಿಯ ವಿರುದ್ಧ ಕೇಸ್

Update: 2022-09-28 12:21 GMT
ಮಮತಾ ಬ್ಯಾನರ್ಜಿ (PTI)

ಕೊಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಕುರಿತು ಅವಹೇಳನಕಾರಿ ಮೀಮ್ಸ್ ಅನ್ನು ಯುಟ್ಯೂಬ್ ಮೂಲಕ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳ (West Bengal) ಪೊಲೀಸರು ಯೂಟ್ಯೂಬರ್(YouTuber) ಬಂಧಿಸಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ತುಹಿನ್ ಮೊಂಡಾಲ್ ಎಂಬಾತನನ್ನು ನಾಡಿಯಾ ಜಿಲ್ಲೆಯ ಬಾಪೂಜಿನಗರದ ಆತನ ಮನೆಯಿಂದ ಬಂಧಿಸಲಾಗಿತ್ತು. ಕಳೆದ ವಾರ ಆತನ ವಿರುದ್ಧ 21 ವರ್ಷದ ಸಾಗರ್ ದಾಸ್ ಎಂಬಾತ ಕೊಲ್ಕತ್ತಾದ ತರತಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ಬಂಧಿಸಲಾಗಿದೆ.

ಟಿಕ್‍ಟೋಕರ್ ಪ್ರಚೇತ, ಟೋಟಲ್ ಫನ್ ಬಾಂಗ್ಲಾ, ರೇಯಾ ಪ್ರಿಯಾ, ಸಾಗರಿಕಾ ಬರ್ಮನ್ ವ್ಲಾಗ್ಸ್, ಲೈಫ್ ಇನ್ ದುರ್ಗಾಪುರ್, ದಿ ಫ್ರೆಂಡ್ಸ್ ಕ್ಯಾಂಪಸ್, ಪೂಜಾ ದಾಸ್ 98 ಮುಂತಾದ ಯೂಟ್ಯೂಬ್ ಚಾನಲ್‍ಗಳನ್ನು ದಾಸ್ ತನ್ನ ದೂರಿನಲ್ಲಿ ಹೆಸರಿಸಿದ್ದನಲ್ಲದೆ ಇವುಗಳು ಪ್ರಸಾರ ಮಾಡುತ್ತಿರುವ ನಿಂದನಾತ್ಮಕ ಮೀಮ್ಸ್ ಶಾಂತಿಯನ್ನು ಕದಡುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದ.

ಬಂಧಿತ ಆರೋಪಿಗೆ ಯಾವುದೇ ನಿಯಮಿತ ಆದಾಯವಿಲ್ಲ ಹಾಗೂ ಮಮತಾ ಬ್ಯಾನರ್ಜಿಯ ಭಾಷಣಗಳ ತುಣುಕುಗಳನ್ನು ಬಳಸಿ ಈ ಮೀಮ್ಸ್ ರಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ವರ್ಷದ ಜೂನ್‍ನಲ್ಲಿ ಮಮತಾ ಬ್ಯಾನರ್ಜಿ ಮತ್ತಿತರ ಟಿಎಂಸಿ ನಾಯಕರನ್ನು ಫೇಸ್ಬುಕ್ ಲೈವ್ ಕಾರ್ಯಕ್ರಮದ ವೇಳೆ ನಿಂದಿಸಿದ ಆರೋಪದ ಮೇಲೆ ಯುಟ್ಯೂಬರ್ ರೊಡ್ಡೂರ್ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು.

2012 ರಲ್ಲಿ ಮಮತಾ ಕುರಿತ ವ್ಯಂಗ್ಯಚಿತ್ರವೊಂದನ್ನು ಇಮೇಲ್ ಮಾಡಿದ ಆರೋಪದ ಮೇಲೆ ಜಾದವಪುರ ವಿವಿ ಪ್ರೊಫೆಸರ್ ಒಬ್ಬರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News