PFI ನಿಷೇಧ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2022-09-28 13:38 GMT

ರಾಮನಗರ, ಸೆ.28: ಪಿಎಫ್‍ಐ ವಿರುದ್ಧ ದಾಖಲೆಗಳಿದ್ದರೆ ಜನರ ಮುಂದೆ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರಕಾರವನ್ನು ಒತ್ತಾಯ ಮಾಡಿದರು.

ಬುಧವಾರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‍ಐ ಸಂಘಟನೆ ವಿಚಾರವಾಗಿ ಈಗಾಗಲೇ ನಾನು ಹೇಳಿದ್ದೇನೆ. ಯಾವುದೇ ಸಂಘಟನೆಗಳು ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿದರೆ ಕಠಿಣ ಕ್ರಮ ಆಗಬೇಕು. ಎನ್‍ಐಎ ದಾಳಿಯ ಸತ್ಯಾಂಶಗಳನ್ನು ಜನತೆ ಮುಂದೆ ಇಡಬೇಕು ಎಂದರು.

ಯಾವ ಯಾವ ಸಂಘಟನೆಗಳಿಂದ ದೇಶ ದ್ರೋಹದ ಕೆಲಸ ಆಗಿದೆ? ಯಾವ ರೀತಿ ಗಲಭೆ ಸೃಷ್ಟಿಗೆ  ಪ್ರೋತ್ಸಾಹ ಕೊಡುತ್ತಿದ್ದಾರೆ ಎಂಬ ಮಾಹಿತಿಯನ್ನು ಜನತೆ ಮುಂದೆ ಇಡಬೇಕು. ಇದು ಕೇಂದ್ರ ಸರಕಾರದ ಕರ್ತವ್ಯ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

ಪಿಎಫ್‍ಐ ಸಂಘಟನೆ ನಿಷೇಧ ಮಾಡಿದ ತಕ್ಷಣ ಸಂಪೂರ್ಣ ಶಾಂತಿ ನೆಲಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದತೆ ಬೆಳೆಸುವ ಕೆಲಸವನ್ನು ಸರಕಾರ ಮಾಡಬೇಕು. ಯಾವುದೇ ಒಂದು ಸಂಘಟನೆ ನಿಷೇಧ ಮಾಡಿದರೆ ಶಾಂತಿ ನೆಲೆಸಲ್ಲ ಎಂದು ಅವರು ಹೇಳಿದರು.

ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ಸರಕಾರದ್ದು ಭಂಡತನ: ಬಿಎಂಎಸ್ ಟ್ರಸ್ಟ್ ವಿಚಾರದಲ್ಲಿ ಸಚಿವರ ಭ್ರಷ್ಟಾಚಾರ ಸಂಬಂಧ ಸದನದ ಮುಂದೆ ಎಲ್ಲ ದಾಖಲೆಗಳನ್ನು ಇಟ್ಟಿದ್ದೇನೆ. ಈ ಪ್ರಕರಣವನ್ನು ತನಿಖೆಗೆ ವಹಿಸದೇ ಬಿಜೆಪಿ ಸರಕಾರ ಭಂಡತನ ಪ್ರದರ್ಶಿಸುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಾನು ಯಾವುದಕ್ಕೂ ಹೆದರುವುದಿಲ್ಲ. ಸದನದಲ್ಲಿ ಮುಖ್ಯಮಂತ್ರಿಯಿಂದ ಏನಾದರೂ ಉತ್ತರ ಬಂತಾ?. ಬಿಎಂಎಸ್ ಟ್ರಸ್ಟ್ ಪಬ್ಲಿಕ್ ಪ್ರಾಪರ್ಟಿ. ಖಾಸಗಿ ವ್ಯಕ್ತಿಗೆ ಸರಕಾರದ ಆಸ್ತಿ ಹೋಗುತ್ತಿದೆ. ಸದನದಲ್ಲಿ ದಾಖಲೆ ಸಮೇತ ಇಟ್ಟಿದ್ದಕ್ಕೆ ಇವರ ಬಳಿ ಉತ್ತರ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಎಂಎಸ್ ಟ್ರಸ್ಟ್ ವಿಚಾರವನ್ನು ಅಷ್ಟು ಸುಲಭವಾಗಿ ನಾನು ಬಿಡುವುದಿಲ್ಲ. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತೇನೆ. ಪ್ರಧಾನ ಮಂತ್ರಿಗಳು ಭ್ರಷ್ಟಾಚಾರ ನಿಲ್ಲಿಸುತ್ತೇನೆ ಅಂತಾ ಹೇಳುತ್ತಾರೆ. ಈಗ ದಾಖಲೆ ಸಮೇತ ಕಳುಹಿಸುತ್ತೇನೆ. ಏನು ಉತ್ತರ ಕೊಡುತ್ತಾರೋ ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಯಾತ್ರೆಗೆ ಟಾಂಗ್: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಭಾರತ ಯಾವಾಗ ಒಡೆದು ಹೋಗಿದೆ ಅನ್ನೋದು ನನಗೆ ಗೊತ್ತಿಲ್ಲ. ಭಾರತ ಜೋಡೋ ಮುಖಾಂತರ ದೇಶವನ್ನು ಒಗ್ಗೂಡಿಸುತ್ತೇವೆ ಅಂತಾ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಯಾವಾಗ ದೇಶ ಛಿದ್ರ ಆಗಿದೆಯೆಂದು ನನಗೆ ಗೊತ್ತಿಲ್ಲ. ಛಿದ್ರ ಆಗಿದ್ದರೆ ಕಾರ್ಯಕ್ರಮದ ಮುಖಾಂತರ ಅದನ್ನು ಹೇಗೆ ಸರಿಪಡಿಸುತ್ತಾರೆ ಎನ್ನುವುದನ್ನು ಜನರ ಮುಂದೆ ಇಡಬೇಕು ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅದರ ವಿರುದ್ಧ ನಾವು ಹೋರಾಡಬೇಕು. ಕಾಂಗ್ರೆಸ್‍ನವರು ಭಾರತ್ ಜೋಡೋ, ಪೇಸಿಎಂ ಮುಖಾಂತರ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಗಡಿ ಶಾಸಕ ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News