ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ: ಸಿದ್ದರಾಮಯ್ಯ ಸ್ಪಷ್ಟನೆ

Update: 2022-09-28 13:33 GMT

ಬೆಂಗಳೂರು, ಸೆ.28: ಕಳೆದ ಕೆಲವು ದಿನಗಳಿಂದ ಕೆಲವು ಮಾಧ್ಯಮಗಳು ಅಕ್ರಮವಾಗಿ ನೇಮಕಗೊಂಡ ಶಿಕ್ಷಕರ ಬಗ್ಗೆ ಬರೆಯುವಾಗ ‘ಕಾಂಗ್ರೆಸ್ ಸರಕಾರದ ಅವಧಿಯ ಶಿಕ್ಷಕರ ನೇಮಕ ಹಗರಣ’ ಎಂದು ಬರೆಯುತ್ತಿದ್ದಾರೆ. ನಾನು ಸೆ.23ರಂದು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಯಾವ ಯಾವ ಆರೋಪಿತರು ಯಾವ ಯಾವ ಕಾಲದಲ್ಲಿ ನೇಮಕಗೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆರೋಪಿಗಳ ಹೆಸರು, ಅಕ್ರಮವಾಗಿ ಆದೇಶ ಪಡೆದ ದಿನಾಂಕ ಇತ್ಯಾದಿ ವಿವರಗಳನ್ನು ದಾಖಲೆ ಸಮೇತ ವಿವರಿಸಿದರೂ ಕೆಲವು ಮಾಧ್ಯಮಗಳು ಮತ್ತೆ ಮತ್ತೆ ಕಾಂಗ್ರೆಸ್ ಸರಕಾರದ ಕಾಲದ, ಸಿದ್ದರಾಮಯ್ಯ ಅವಧಿಯ ನೇಮಕಾತಿ ಹಗರಣ ಎಂದೆಲ್ಲ ಬರೆಯುತ್ತಿದ್ದಾರೆ. ದಸ್ತಗಿರಿಯಾಗಿರುವ 12 ಜನ ಶಿಕ್ಷಕರಲ್ಲಿ 7 ಜನರು 2019ರಲ್ಲಿ ಯಡಿಯೂರಪ್ಪ  ಮುಖ್ಯಮಂತ್ರಿಯಾಗಿದ್ದಾಗ, ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿದ್ದಾಗ ನೇಮಕಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಉಳಿದ 5 ಜನರಲ್ಲಿ ಇಬ್ಬರು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನೇಮಕಗೊಂಡಿದ್ದಾರೆ. ಉಳಿದವರಲ್ಲಿ ಒಬ್ಬನಿಗೆ 2018ರಲ್ಲಿ, ಒಬ್ಬ 2015ರಲ್ಲಿ, ಮತ್ತೊಬ್ಬ 2017ರಲ್ಲಿ, ಇನ್ನೊಬ್ಬ 2018 ರಲ್ಲಿ ನೇಮಕಾತಿ ಆದೇಶ ಪಡೆದಿದ್ದಾನೆಂದು ದಾಖಲೆಗಳು ಹೇಳುತ್ತವೆ. 2012-13 ರಲ್ಲಿ ಕರೆದಿದ್ದ ಶಿಕ್ಷಕರ ಹುದ್ದೆಗಳ ಬ್ಯಾಚಿನಲ್ಲೂ ಒಬ್ಬಾತ ಸೇರಿಕೊಂಡಿದ್ದಾನೆಂಬ ಮಾಹಿತಿ ಇದೆ. ಅದರ ನಂತರ 2015 ರಲ್ಲಿ ಮತ್ತೊಮ್ಮೆ ಹುದ್ದೆಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. 

ಈ ಅವಧಿಗಳಲ್ಲಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಮತ್ತು ಕಿಮ್ಮನೆ ರತ್ನಾಕರ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು. ಈಗಾಗಲೆ ಶಿಕ್ಷಣ ಸಚಿವರು ಮಾಧ್ಯಮಗಳಿಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆಂದು ವಿವರಿಸಿದ್ದಾರೆ. ಒಮ್ಮೆ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಿದ ನಂತರ ನೇಮಕಾತಿ ಪ್ರಕ್ರಿಯೆಯು ನೇಮಕಾತಿ ಪ್ರಾಧಿಕಾರದಿಂದ ನಡೆಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ನೇಮಕಾತಿ ಪಟ್ಟಿಯು ಡಿಡಿಪಿಐ ಮತ್ತು ಜಂಟಿ ನಿರ್ದೇಶಕರಿಂದ ಅನುಮೋದನೆಗೊಳ್ಳುತ್ತದೆ. ನೇರ ನೇಮಕಾತಿಗಳಾದ್ದರಿಂದ ಬೇರೆ ಯಾರ ಹಸ್ತಕ್ಷೇಪಗಳು ಇರುವುದಿಲ್ಲವೆಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಏನೆ ಆದರೂ, ಯಾರದೆ ಅವಧಿಯಲ್ಲಿ ನಡೆದಿದ್ದರೂ ಈ ರೀತಿಯ  ದ್ರೋಹ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಜರುಗಿಸಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಉಲ್ಭಣಗೊಳ್ಳುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವ ಕಡೆಗೆ ಸರಕಾರ ಗಂಭೀರ ಪ್ರಯತ್ನಗಳನ್ನು ಮಾಡಬೇಕು. ಜೊತೆಗೆ ಮಾಧ್ಯಮಗಳಿಗೆ ಸರಕಾರವೆ, ಸಚಿವರ ಕಚೇರಿಗಳೆ ತಪ್ಪು ಮಾಹಿತಿ ಕೊಡುವುದನ್ನು ನಿಲ್ಲಿಸಬೇಕು. ಅಥವಾ ತನಿಖೆ ನಡೆಸುತ್ತಿರುವ ಸಂಸ್ಥೆಯಾದರೂ ಈ ಕುರಿತು ಕಾಲ ಕಾಲಕ್ಕೆ ಮಾಧ್ಯಮಗಳಿಗೆ ವಿವರಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಒಟ್ಟಾರೆಯಾಗಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಹಾಗೂ ನ್ಯಾಯನಿಷ್ಠರಾಗಿರಬೇಕೆಂದು ಆಗ್ರಹಿಸುತ್ತೇನೆ. ಇದೆಲ್ಲದರ ಜೊತೆಯಲ್ಲಿ ನಿರುದ್ಯೋಗವು ರಾಜ್ಯದಲ್ಲಿ ಅಸಹನೀಯ ಮಟ್ಟಕ್ಕೆ ಮುಟ್ಟಿದೆ. ರಾಜ್ಯದಲ್ಲಿ ಪದವೀಧರ ಹೆಣ್ಣುಮಕ್ಕಳ ನಿರುದ್ಯೋಗದ ಪ್ರಮಾಣ ಶೇ.39-40 ರಷ್ಟಿದೆ. ಪದವೀಧರ ಯುವಕರ ನಿರುದ್ಯೋಗವು ಶೇ.35 ರವರೆಗೆ ಇದೆ. ಇರುವ ಒಂದೊಂದು ಹುದ್ದೆಗೆ 2-3 ಸಾವಿರ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕುರಿತು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News