ಅರಣ್ಯ ಸಮಸ್ಯೆಯಿಂದ ಬೇಸತ್ತು ಕ್ಷೇತ್ರದ ಜನ ಜೀವ ಬೆದರಿಕೆ ಹಾಕುತ್ತಿದ್ದಾರೆ: ಶಾಸಕ ಟಿ.ಡಿ.ರಾಜೇಗೌಡ ಆರೋಪ

Update: 2022-09-28 14:01 GMT
 ಟಿ.ಡಿ.ರಾಜೇಗೌಡ 

ಚಿಕ್ಕಮಗಳೂರು, ಸೆ.28: 'ಮಲೆನಾಡು ಭಾಗದಲ್ಲಿ ಅರಣ್ಯ ಸಮಸ್ಯೆಯಿಂದ ಬೇಸತ್ತ ಜನರಿಂದ ತನಗೆ ಜೀವ ಬೆದರಿಕೆ ಬಂದಿದೆ. ನೊಂದ ಜನರು ಹತಾಶೆಯಿಂದ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನಾನು ದೂರು ಕೊಡುವುದಿಲ್ಲ, ಜನರ ಸಮಸ್ಯೆಗೆ ಸರಕಾರ ಪರಿಹಾರ ಒದಗಿಸುತ್ತಿಲ್ಲ. ಜನರ ಸಮಸ್ಯೆ ಪರಿಹರಿಸದಿದ್ದಲ್ಲಿ ಜನರು ಸರಕಾರಕ್ಕೆ ಬೆದರಿಕೆ ಹಾಕಲ್ಲ, ನನಗೆ ಬೆದರಿಕೆಯನ್ನೂ ಹಾಕುತ್ತಾರೆ. ಜನರ ಸಮಸ್ಯೆಗೆ ಪರಿಹಾರ ನೀಡದ ನಾವು ಇದ್ದರೆಷ್ಟು ಸತ್ತರೆಷ್ಟು' ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಗರದ ಜಿ. ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅರಣ್ಯ ಸಮಸ್ಯೆಗಳ ಪ್ರಸ್ತಾಪದ ಸಂದರ್ಭದಲ್ಲಿ ತಮ್ಮ ನೋವನ್ನು ತೋಡಿಕೊಂಡ ಶಾಸಕ ರಾಜೇಗೌಡ , 'ಜೀವ ಬೆದರಿಕೆ ಇರುವುದು ಸತ್ಯ, ಪೊಲೀಸರಿಗೆ ದೂರು ನೀಡಿ, ಪೊಲೀಸ್ ರಕ್ಷಣೆಯಲ್ಲಿ ಕ್ಷೇತ್ರ ಸುತ್ತಲು ಸಾಧ್ಯವಿಲ್ಲ, ಆದ್ದರಿಂದ ತನಗೆ ಇರುವ ಜೀವಬೆದರಿಕೆ ಸಂಬಂಧ ಪೊಲೀಸರಿಗೆ ದೂರು ನೀಡುವುದಿಲ್ಲ. ನನ್ನ ಕ್ಷೇತ್ರದಲ್ಲಿರುವ ಅರಣ್ಯ ಸಮಸ್ಯೆಯನ್ನು ಬಗೆಹರಿಸುವುದೊಂದೇ ಇಂತಹ ಸಮಸ್ಯೆಗಳಿಗೆ ಪರಿಹಾರ. ಸರಕಾರ ಈ ಸಂಬಂಧ ಅಗತ್ಯ ಕ್ರಮವಹಿಸಬೇಕು' ಎಂದು ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಉಳಿದ ಶಾಸಕರು, ಜೀವ ಬೆದರಿಕೆ ಇದೆ ಎಂದಾದಲ್ಲಿ ದೂರು ದಾಖಲಿಸಬೇಕು, ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ಶಾಸಕ ರಾಜೇಗೌಡ, ನಾನು ಬೆದರಿಕೆ ಹಾಕಿದವರ ಹೆಸರು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ, ನನಗೆ ರಕ್ಷಣೆ ಬೇಡ, ಅರಣ್ಯ ಸಮಸ್ಯೆಗಳಿಗೆ ಪರಿಹಾರ ಸಿಗದ ಪರಿಣಾಮ ಜನರು ಸಿಟ್ಟು, ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಅರಣ್ಯ ಸಮಸ್ಯೆ ಪರಿಹರಿಸುವ ಕೆಲಸ ನನ್ನಿಂದಾಗಲ್ಲ, ಅದು ನ್ಯಾಯಾಲದಲ್ಲಿರುವ ಸಮಸ್ಯೆಯಾಗಿದ್ದು, ಇದಕ್ಕೆ ಸರಕಾರವೇ ಪರಿಹಾರ ನೀಡಬೇಕು. ಶೀಘ್ರ ಸಮಸ್ಯೆ ಬಗೆಹರಿಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಭೈರತಿ ಬಸವರಾಜ್ ಮಾತನಾಡಿ, ಕಳೆದ 20-30 ವರ್ಷಗಳಿಂದ ಅರಣ್ಯ ಸಮಸ್ಯೆ ಬಗೆಹರಿದಿಲ್ಲ. ಈ ಸಂಬಂಧ ವಿಶೇಷ ಸಭೆ ನಡೆಸೋಣ, ಸಾಧ್ಯವಾದರೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸೋಣ ಎಂದರು.

ಜೀವಬೆದರಿಕೆ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ರಾಜೇಗೌಡ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಗೂ ಮುನ್ನಾ ಅಲ್ಲಿನ ಜನರ ಬದುಕು ಚೆನ್ನಾಗಿತ್ತು. ಉದ್ಯಾನವನ ಘೋಷಣೆ ನಂತರ ಕಿಗ್ಗಾ ಸೇರಿದಂತೆ ಇತರೆ ಗ್ರಾಮಗಳ ಜನರಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜಾಗವನ್ನು ಅರಣ್ಯವೆಂದು ಘೋಷಿಸಲಾಗಿದೆ. 4(1) ನೋಟಿಫಿಕೇಶನ್ ಆಗಿದೆ. ಆದರೆ ಜನರಿಗೆ ಪರಿಹಾರ ಸಿಕ್ಕಿಲ್ಲ, ಅರಣ್ಯವೆಂದು ಘೋಷಿಸದಿರಲು ಜನರು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಪರಿಹಾರ ನೀಡಲು ಸಾಧ್ಯವಾಗಿಲ್ಲ. ನೋಟಿಫಿಕೇಶನ್‍ನಿಂದ ಗ್ರಾಮಗಳನ್ನು ಹೊರಗಿಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

ಬದುಕಿಗೆ ಸಂಚಕಾರ ಬಂದಾಗಿ ಜನರು ಕೋಪದಿಂದ ಬೆದರಿಕೆ ಹಾಕುತ್ತಿದ್ದಾರೆ. ಜೀವ ಬೆದರಿಕೆಯ ಪತ್ರವೂ ಬಂದಿದೆ. ಈ ಸಂಬಂಧ ನಾನು ಯಾರಿಗೂ ದೂರು ಕೊಡುವುದಿಲ್ಲ, ಸರಕಾರ ಅರಣ್ಯ ಸಮಸ್ಯೆಯನ್ನು ಬಗೆ ಹರಿಸಿದಲ್ಲಿ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. 

ಕಿಗ್ಗಾದಲ್ಲಿ ಗ್ರಾಮವೊಂದಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಅರ್ಧಕ್ಕೆ ನಿಂತಿದೆ. ಅರಣ್ಯ ಇಲಾಖೆ ಕಾಮಗಾರಿ ಮುಂದುವರಿಸಲು ಬಿಡಲ್ಲ ಎಂದು ಜನರೇ ಬೆದರಿಕೆ ಹಾಕಿದ್ದಾರೆ. ಸಮಸ್ಯೆ ಬಗೆಹರಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಕೊಲೆಬೆದರಿಕೆಯ ಪತ್ರ ಬಂದಿದೆ. ಮೌಖಿಕವಾಗಿ ಹೇಳಿದ್ದಾರೆ. ಜನರಿಗೆ ಮೂಲಸೌಲಭ್ಯ ಕಲ್ಪಿಸುವುದು ಸರಕಾರ ಕರ್ತವ್ಯ. ಸರಕಾರ ಮತ್ತು ಅರಣ್ಯ ಇಲಾಖೆ ಆ ಭಾಗದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News