ಚೆಕ್ ಸಹಿಗೆ ಕೋರಿದ ಮುರುಘಾ ಶ್ರೀ: ನಿರ್ದಿಷ್ಟ ಮನವಿ ಸಲ್ಲಿಕೆಗೆ ಹೈಕೋರ್ಟ್ ನಿರ್ದೇಶನ

Update: 2022-09-28 14:31 GMT

ಬೆಂಗಳೂರು, ಸೆ.28: ಪೋಕ್ಸೊ ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಕಾರಾಗೃಹದಿಂದಲೇ ಮಠದ ಬ್ಯಾಂಕ್ ಖಾತೆಗಳ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಈ ಸಂಬಂಧ ನಿರ್ದಿಷ್ಟ ಮನವಿ ಸಲ್ಲಿಸಿ ಎಂದು ಹೈಕೋರ್ಟ್ ಅವರ ಪರ ವಕೀಲರಿಗೆ ನಿರ್ದೇಶನ ನೀಡಿದೆ.

ಈ ಸಂಬಂಧ ಆರೋಪಿ ಮುರುಘಾ ಶ್ರೀಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲರು, ಮುರುಘಾಶ್ರೀಗಳು ಪೋಕ್ಸೊ ಕಾಯ್ದೆಯ ಆರೋಪದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶ್ರೀಗಳು ಮಠದ ವಿದ್ಯಾಪೀಠದ ಆರ್ಥಿಕ ವ್ಯವಹಾರದ ನೇರ ಉಸ್ತುವಾರಿಯ ಏಕೈಕ ವ್ಯಕ್ತಿಯಾಗಿದ್ದು, ಅವರ ಹೆಸರಿನಲ್ಲಿಯೇ ಬ್ಯಾಂಕ್ ಖಾತೆಗಳಿವೆ. ಇದರಿಂದ, ಮಠದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಂಬಳವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ, ಸಹಿ ಮಾಡಲು ಅವಕಾಶ ನೀಡುವಂತೆ ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮುರುಘಾ ಶ್ರೀಗಳು ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಮಠಕ್ಕೆ ಏನಾದರೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆಯೇ ಎಂಬ ಪ್ರಶ್ನೆಯನ್ನು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠವು ಕೇಳಿತು.
ಸರಕಾರದ ಪರ ವಾದಿಸಿದ ವಕೀಲರು, ನ್ಯಾಯಾಂಗ ಬಂಧನದಲ್ಲಿ ಇದ್ದುಕೊಂಡು ಆರೋಪಿಗಳು ತಮ್ಮ ಬ್ಯಾಂಕ್ ಖಾತೆಯ ಚೆಕ್‌ಗೆ ಸಹಿ ಮಾಡಲು ಬರುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರು ಏನು ಹೇಳಲು ಬಯಸುತ್ತಿದ್ದಾರೋ ಅದರ ಪ್ರಸ್ತಾಪವನ್ನು ಲಿಖಿತವಾಗಿ ಜ್ಞಾಪನಾ ಪತ್ರದೊಂದಿಗೆ ನ್ಯಾಯಪೀಠಕ್ಕೆ ಸಲ್ಲಿಸಲಿ. ಸೆ.29ರಂದು ವಿಚಾರಣೆ ನಡೆಸೋಣ ಎಂದು ವಿಚಾರಣೆ ಮುಂದೂಡಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News