ಮೈಸೂರು ದಸರಾದಲ್ಲಿ ಪುಸ್ತಕ ಪ್ರದರ್ಶನ ಕೈಬಿಟ್ಟ ರಾಜ್ಯ ಸರಕಾರ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

Update: 2022-09-28 15:19 GMT

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಈ ವರ್ಷ ಕನ್ನಡ ಪುಸ್ತಕ ಪ್ರದರ್ಶನವನ್ನು ಕೈಬಿಟ್ಟಿರುವ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿ ಅವರು ಸರಕಾರದ ನಡೆಯನ್ನು ಟೀಕಿಸಿದ್ದಾರಲ್ಲದೆ, ಮಾಧ್ಯಮ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.

'ಕನ್ನಡ ನಾಡಿನ ಶ್ರೀಮಂತ ಪರಂಪರೆ, ಸಾಹಿತ್ಯ ಸಿರಿ ಸಂಪತ್ತಿನ ಹೆಗ್ಗುರುತು ನಾಡಹಬ್ಬ ಮೈಸೂರು ದಸರಾ ಬಗ್ಗೆ ರಾಜ್ಯ ಬಿಜೆಪಿ ಸರಕಾರದ ನೀತಿ ಅತ್ಯಂತ ಖಂಡನೀಯ. ಕನ್ನಡ ಭಾಷೆ, ಸಂಸೃತಿಯ ಕುರಿತು ಆಡಳಿತ ನಡೆಸುವವರ ದಿವ್ಯನಿರ್ಲಕ್ಷ್ಯ ಮಾತೃಭಾಷೆಗೆ ಮಾಡಿರುವ ಅಪಮಾನ ಮತ್ತು ದ್ರೋಹ' ಎಂದು ಅವರು ಕಿಡಿಕಾರಿದ್ದಾರೆ. 

'ಮೈಸೂರು ದಸರೆಯಲ್ಲಿ ಕನ್ನಡ ಪುಸ್ತಕ ಪ್ರದರ್ಶನ ಅನಾದಿ ಕಾಲದಿಂದ ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿರುವ ಕನ್ನಡ ತಾಯಿಯ ಸೇವಾ ಕೈಂಕರ್ಯ. ಆದರೆ, ಬಿಜೆಪಿ ಸರಕಾರ ಕನ್ನಡ ಪುಸ್ತಕ ಪ್ರದರ್ಶನಕ್ಕೇ ಕೊಕ್ ಕೊಟ್ಟು, ತನ್ನ ಕನ್ನಡ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾರಿದೆ. ಪುಸ್ತಕ ಸಂಸ್ಕೃತಿಗೆ ಧಕ್ಕೆ ತಂದಿದೆ' ಎಂದು ಅವರು ಹೇಳಿದ್ದಾರೆ. 

'ಮೈಸೂರು ಸಾಂಸ್ಕೃತಿಕ ನಗರಿ. ದಸರಾ, ಜಗದ್ವಿಖ್ಯಾತ  ಸಾಂಸ್ಕೃತಿಕ ಉತ್ಸವ. ಹೀಗಿದ್ದೂ ರಾಜ್ಯ ಬಿಜೆಪಿ ಸರಕಾರವು ಕನ್ನಡವನ್ನು ಧಿಕ್ಕರಿಸಿ ತನ್ನ ʼರಹಸ್ಯ ಕಾರ್ಯಸೂಚಿʼಯನ್ನು ಹೇರಲು ಹೊರಟಿದೆ. ಹಿಂದಿ ಭಾಷೆಯ ವಕ್ತಾರಿಕೆ ಮಾಡುವ ಬಿಜೆಪಿ ಪಕ್ಷದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?'ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

'ಕನ್ನಡವನ್ನು ಮುಗಿಸುವುದನ್ನೇ ರಾಜ್ಯ ಬಿಜೆಪಿ ಸರಕಾರದ ಸರಕಾರ ನಿತ್ಯಕಾಯಕ ಮಾಡಿಕೊಂಡಿದೆ. ಸಮಯ ಸಿಕ್ಕಾಗಲೆಲ್ಲಾ ಕನ್ನಡಕ್ಕೆ ಕೊಡಲಿಪೆಟ್ಟು ಕೊಡುವ ಕೆಲಸ ಮಾಡುತ್ತಲೇ ಇದೆ. ಕನ್ನಡಿಗರ ಶಾಂತಿ, ಸಹನೆಯನ್ನು ಬಿಜೆಪಿ ಪರೀಕ್ಷೆ ಮಾಡುತ್ತಿದೆ. ಬೇಕೆಂದೇ, ಉದ್ದೇಶಪೂರ್ವಕವಾಗಿ ಕನ್ನಡ ಪುಸ್ತಕ ಪ್ರದರ್ಶನವನ್ನು ಕೈಬಿಟ್ಟಂತೆ ಕಾಣುತ್ತಿದೆ. ರಾಜ್ಯ ಬಿಜೆಪಿ ಸರಕಾರ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ಸುನೀಲ್ ಕುಮಾರ್ ಅವರೇ ಈ ಬಗ್ಗೆ ಕನ್ನಡಿಗರಿಗೆ ಉತ್ತರ ಕೊಡಬೇಕು. ತಕ್ಷಣ ಕನ್ನಡ ಪುಸ್ತಕ ಪ್ರದರ್ಶನವನ್ನು ಆಯೋಜನೆ ಮಾಡಬೇಕು' ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News