ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ, ಪರಿಶೀಲನೆ

Update: 2022-09-28 15:42 GMT

ಬೆಂಗಳೂರು, ಸೆ.28:ಆದಾಯಕ್ಕಿಂತ ಆಸ್ತಿಗಳಿಕೆ ಆರೋಪ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ. 

ಬುಧವಾರ ಬೆಳಗ್ಗೆ 11ಗಂಟೆ ಸುಮಾರಿಗೆ ಶಿವಕುಮಾರ್ ಅವರ ಕನಕಪುರ, ದೊಡ್ಡ ಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿದ್ದಾರೆನ್ನಲಾಗಿದೆ. 

ಈ ಸಂದರ್ಭದಲ್ಲಿ ಕನಕಪುರ ತಹಶೀಲ್ದಾರ್ ಹಾಗೂ ಪೋಲೀಸರ ಜತೆಗೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದರು.ಸತತ ಮೂರು ಗಂಟೆವರೆಗೂ ಪರಿಶೀಲನೆ ನಡೆಸಲಾಗಿದ್ದರೂ ಈ ಬಗ್ಗೆ ಯಾರಿಗೂ ಮಾಹಿತಿ ಬಿಟ್ಟು ಕೊಡದೆ ಗೌಪ್ಯವಾಗಿಯೇ ಮಾಹಿತಿ ಕಲೆ ಹಾಕಿದ್ದಾರೆ.

ಎರಡು ವರ್ಷದ ಹಿಂದೆ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿತ್ತು. ಡಿಕೆಶಿ ಹಾಗೂ ಅವರ ಕುಟುಂಬಸ್ಥರು 74.93 ಕೋಟಿ ಮೊತ್ತದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂಬುವುದು ಸಿಬಿಐ ಆರೋಪವಾಗಿತ್ತು.

ಆದರೆ, ಈ ಪ್ರಕರಣ ರದ್ದು ಕೋರಿ ಡಿಕೆಶಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಬೇಕು ಎಂದು ನ್ಯಾಯಾಲಯಕ್ಕೆ ಸಿಬಿಐ ಮನವಿ ಮಾಡಿದೆ.ಮತ್ತೊಂದೆಡೆ ಅಕ್ರಮ ಹಣ ವರ್ಗಾವಣೆ, ಆಸ್ತಿ ಗಳಿಗೆ ಪ್ರಕರಣಗಳಲ್ಲಿ ಡಿ.ಕೆ.ಶಿವಕುಮಾರ್ ಆರೋಪಿಯಾಗಿದ್ದು, ಈಡಿ ಅಧಿಕಾರಿಗಳು ಸಹ ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಗಳು ನಮ್ಮನ್ನು ಪ್ರತಿಸುತ್ತಿವೆ: ಡಿ.ಕೆ.ಶಿವಕುಮಾರ್

''ಕೇಂದ್ರ ತನಿಖಾ ಸಂಸ್ಥೆಗಳಿಗೆ ಮೊದಲೇ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ಇಂದು ಸಿಬಿಐ ಅಧಿಕಾರಿಗಳು ತಹಶೀಲ್ದಾರ್ ಅವರನ್ನು ಕರೆದುಕೊಂಡು ಬಂದು ಪರಿಶೀಲನೆ ನಡೆಸಿದ್ದಾರಂತೆ. ಕನಕಪುರ, ದೊಡ್ಡ ಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ಭೇಟಿ ನೀಡಿ ತೋಟ ಸೇರಿ ಕುಟುಂಬದ ಎಲ್ಲ ಆಸ್ತಿ ಪರಿಶೀಲನೆ ನಡೆಸಿದ್ದಾರೆ'' ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News