ಹೊಳೆನರಸೀಪುರ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿದ ಕಟುಂಬ

Update: 2022-09-28 17:23 GMT

ಹೊಳೆನರಸೀಪುರ: ಅಪಘಾತವಾಗಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಆತನ ಕುಟುಂಬ ನೋವಿನಲ್ಲಿಯೂ ಸಾರ್ಥಕತೆ ಮೆರೆದಿದೆ.

ಹೊಳೆನರಸೀಪುರ ತಾಲೂಕಿನ ತಿರುಮಲಾಪುರ ಗ್ರಾಮದ ಸಂಪತ್ತು ಎಂಬುವರ ಪುತ್ರ 22 ವರ್ಷದ ಸಾರ್ಗ ಎಂಬಾತ ಹಾಸನದ ಸಾಯಿ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ. ಸೆ.24ರಂದು ಹಾಸನದ ಕೆಐಎಡಿಬಿ ಸರ್ಕಲ್ ನಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಸಾರ್ಗ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವಕನ ಮೆದುಳು ನಿಷ್ಕ್ರಿಯ ವಾಗಿರುವುದರಿಂದ ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನು ತಿಳಿದ ಪೋಷಕರು ಮಗನ ಅಗಲಿಕೆಯ ನೋವಿನ ನಡುವೆಯೂ ಆತನ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.

ಮಂಗಳವಾರ ರಾತ್ರಿ ಕಣ್ಣು, ಕಿಡ್ನಿ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾನ ಮಾಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅಷ್ಟೇ ಅಲ್ಲ ಇತರರಿಗೆ ಮಾದರಿ ಎನಿಸಿದ್ದಾರೆ.

ಅಂಗಾಂಗ ದಾನ ಮಾಡಿ ಬಡತನದಲ್ಲೂ ಹೃದಯ ಶ್ರೀಮಂತಿಕೆ ತೋರಿದ ಸಾರ್ಗ ಕುಟುಂಬದ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬುಧವಾರ ಬೆಳಗ್ಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿತು.

ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ ಸಾರ್ಗ ಅವರ ಅಂತಿಮ ದರ್ಶನ ಪಡೆಯಲು ಸ್ನೇಹಿತರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹತ್ತಾರುಗ್ರಾಮಗಳ ಜನರು ಆಗಮಿಸಿ ಕಂಬನಿ ಮಿಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News