ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ: ಸಿಬಿಐ ದಾಳಿ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

Update: 2022-09-28 17:39 GMT

ಬೆಂಗಳೂರು: 'ಸಿಬಿಐ ಅಧಿಕಾರಿಗಳು ಕನಕಪುರದ ತಹಶೀಲ್ದಾರ್ ಅವರನ್ನು ಕರೆದುಕೊಂಡು ಹೋಗಿ ಊರಿನಲ್ಲಿರುವ ನನ್ನ ಆಸ್ತಿಗಳನ್ನು ಪರಿಶೀಲನೆ ಮಾಡಿದ್ದಾರೆ ಎಂದು ನನ್ನ ಸಿಬ್ಬಂದಿ ದೂರವಾಣಿ ಮೂಲಕ ತಿಳಿಸಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ' ನಾನು ಈಗಾಗಲೇ ಅವರು ಕೇಳಿದ ದಾಖಲೆಗಳನ್ನು ಕೊಟ್ಟಿದ್ದೆ. ಆದರೂ ಕನಕಪುರ, ದೊಡ್ಡಆಲಹಳ್ಳಿ, ಕೋಡಿಹಳ್ಳಿ ಮನೆ ಹಾಗೂ ಜಮೀನಿನ ಪರಿಶೀಲನೆ ಮಾಡಿದ್ದಾರೆ. ನಾನು ಕಾನೂನಿಗೆ ಗೌರವ ನೀಡುತ್ತೇನೆ. ಬೇರೆಯವರ ವಿರುದ್ಧ ಅಕ್ರಮ ಆಸ್ತಿ ಆರೋಪ ಇದ್ದರೂ ಕೇವಲ ನನ್ನ ಪ್ರಕರಣಕ್ಕೆ ಮಾತ್ರ ಸಿಬಿಐ ತನಿಖೆಗೆ ಅನುಮತಿ ನೀಡಿದ್ದಾರೆ.  ಅವರ ಪ್ರಕರಣದ ಬಗ್ಗೆ ಎಸಿಬಿ ತನಿಖೆ ಮಾಡಿದರೆ ನನಗೆ ಸಿಬಿಐ ತನಿಖೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ನಾನು ನಿಮ್ಮ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ, ಈಗ ಚುನಾವಣಾ ಸಮಯದಲ್ಲಿ ನಾನು ಸ್ವಲ್ಪ ಬ್ಯುಸಿ ಇದ್ದೇನೆ ಎಂದು ಬೆಂಗಳೂರು ಹಾಗೂ ದೆಹಲಿ ಕಚೇರಿಗೆ ಪತ್ರ ಬರೆದಿದ್ದೆ. ಆದರೆ ಅವರು ಬಹಳ ತರಾತುರಿಯಲ್ಲಿ ಇದ್ದಾರೆ. ನನಗೆ ಮಾನಸಿಕವಾಗಿ ಕಿರಿಕಿರಿ ಆಗುತ್ತಿದೆ. ನಾನು ದಿನ ಬೆಳಗಾಗುವುದರಲ್ಲಿ ಮ್ಯಾಜಿಕ್ ಮಾಡಲು ಆಗುವುದಿಲ್ಲ. ಮೊದಲಿನಿಂದಲೂ ನನ್ನ ಆಸ್ತಿ ಊರಿನಲ್ಲಿ ಇದೆ. ಚುನಾವಣಾ ಆಯೋಗ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ಎಲ್ಲ ಇಲಾಖೆಗಳಿಗೆ ಮಾಹಿತಿ ನೀಡಿದ್ದೇನೆ. ಆದರೂ ಈಗ ಈ ರೀತಿ ಪರಿಶೀಲನೆ ಯಾಕೆ ಎಂದು ಗೊತ್ತಿಲ್ಲ' ಎಂದು ತಿಳಿಸಿದರು. 

'ನಿಮ್ಮನ್ನು ಗುರಿ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, ' ಇದು ಹಣೆಬರಹ, ಏನು ಮಾಡಲು ಸಾಧ್ಯ. ಅವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದಕ್ಕಿಂತ ಪ್ರೀತಿ ಮಾಡುತ್ತಿದ್ದಾರೆ ಎಂದರು. ನಿಮ್ಮ ಧೈರ್ಯ ಕೆಡಿಸುವ ಹುನ್ನಾರವೇ ಎಂದು ಕೇಳಿದಾಗ, 'ಕೇವಲ ನನ್ನ ವಿರುದ್ಧ ಮಾತ್ರ ಸಿಬಿಐ ತನಿಖೆ ಯಾಕೆ? ಲೋಕಾಯುಕ್ತ ಇಲಾಖೆ, ಚುನಾವಣಾ ಆಯೋಗ ನನ್ನ ಆಸ್ತಿ ಬಗ್ಗೆ ಪ್ರಶ್ನೆ ಮಾಡಿದ್ದರೆ ಬೇರೆ ವಿಚಾರ. ನನ್ನ ವಿಚಾರದಲ್ಲಿ ವಿಶೇಷವಾಗಿ ಸಿಬಿಐ ವಿಚಾರಣೆ ಯಾಕೆ?' ಎಂದು ಮರುಪ್ರಶ್ನೆ ಮಾಡಿದರು.

'ವಿಚಾರಣೆಗೆ ಕರೆದು ನೋಟಿಸ್ ನೀಡಿದ್ದಾರಾ ಎಂಬ ಪ್ರಶ್ನೆಗೆ, ' ಇಡಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ನನಗೆ ಬೇರೆಯದೇ ಮಾಹಿತಿ ಇದೆ. ಈ ಬಗ್ಗೆ ಆನಂತರ ಮಾತನಾಡುತ್ತೇನೆ ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News