ಶಿವಮೊಗ್ಗ | ಪಿಎಫ್ಐ, ಎಸ್ ಡಿಪಿಐ ಕಚೇರಿ, ಮುಖಂಡರ ಮನೆಗಳ ಮೇಲೆ ಪೊಲೀಸ್ ದಾಳಿ

Update: 2022-09-29 05:14 GMT

ಶಿವಮೊಗ್ಗ, ಸೆ.29:  ಕೇಂದ್ರ ಸರಕಾರವು ಪಿಎಫ್ಐ(PFI) ಹಾಗೂ ಅದರ ಸಹ ಸಂಘಟನೆಗಳನ್ನು ನಿಷೇಧಿಸಿದ ಬೆನ್ನಲ್ಲೇ ಶಿವಮೊಗ್ಗ ಪೊಲೀಸರು ಪಿಎಫ್ಐ ಹಾಗೂ ಎಸ್.ಡಿ.ಪಿ.ಐ.(SDPI) ಕಚೇರಿ, ಅದರ ಕೆಲವು ಮುಖಂಡರುಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಬುಧವಾರ ತಡರಾತ್ರಿ ಜಿಲ್ಲಾಧಿಕಾರಿಯ ಅನುಮತಿ ಪಡೆದು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ  ಕಾರ್ಯಾಚರಣೆ ನಡೆಸಿದ್ದಾರೆ.

ಪಿಎಫ್ಐ ಮುಖಂಡರ ಮನೆಗಳು ಸೇರಿದಂತೆ ಎಸ್.ಡಿ.ಪಿ.ಐ. ಕಚೇರಿಯಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದರು. ಬೈಪಾಸ್ ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿಗೆ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮೊಬೈಲ್ ಫೋನ್ ಸೇರಿದಂತೆ ಹಲವು ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಎಸ್ ಅಧಿಕಾರಿ ಚಿದಾನಂದ್ ವಟಾರೆ ನೇತೃತ್ವದಲ್ಲಿ ಗಾಂಧಿ ಬಝಾರ್‌ನಲ್ಲಿರುವ ಪಿಎಫ್‌ಐ ಕಾರ್ಯಕರ್ತ ಉಮರ್

ಫಾರೂಕ್ ಎಂಬವರ ಮನೆಗೆ ದಾಳಿ ನಡೆಸಲಾಗಿದೆ. ಮೊಬೈಲ್ ಫೋನ್, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ಮನೆಗೆ ಬೀಗಮುದ್ರೆ ಹಾಕಲಾಗಿದೆ.

ಟಿಪ್ಪುನಗರದಲ್ಲಿರುವ ಎಸ್‌ಡಿಪಿಐ ಮಾಜಿ ಜಿಲ್ಲಾ ಅಧ್ಯಕ್ಷ ಸಲೀಂ ಖಾನ್ ಮನೆ, ಗೋಪಾಳ ಪ್ರೆಸ್ ಕಾಲನಿಯ ಪಿಎಫ್‌ಐ ಅಧ್ಯಕ್ಷ ಉಬೈದುಲ್ಲಾ ಶರೀಫ್ ಮನೆ, ಬೈಪಾಸ್‌ನಲ್ಲಿರುವ ಗುಂಡಿ ಬಡಾವಣೆಯಲ್ಲಿ ಪಿಎಫ್‌ಐ ಮಾಜಿ ಅಧ್ಯಕ್ಷ ರಿಝ್ವಾನ್ ಮನೆ, ಸುಲ್ತಾನ್ ಮೊಹಲ್ಲಾದ ಎರಡನೇ ಕ್ರಾಸ್‌ನಲ್ಲಿರುವ ಯೂಸುಫ್ ಎಂಬವರ ಮನೆಯ ಮೇಲೂ ದಾಳಿ ನಡೆಸಿ ಪರಿಶೀಲಿಸಲಾಗಿದೆ.

ಇದನ್ನೂ ಓದಿ: ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News