'ಕೋಮುದ್ವೇಷಕ್ಕೆ ಬಲಿಯಾದ' ಎಂದು ಸಂಘಪರಿವಾರ ಕಾರ್ಯಕರ್ತರಿಂದಲೇ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಫೋಟೊ ಹಾಕಿದ ಬಿಜೆಪಿ

Update: 2022-09-29 09:59 GMT

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿರುವ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, 'ಕೋಮುದ್ವೇಷಕ್ಕೆ ಬಲಿಯಾದ ನಮ್ಮ ಕಾರ್ಯಕರ್ತ' ಎಂದು ಸಂಘಪರಿವಾರದ ಕಾರ್ಯಕರ್ತರಿಂದಲೇ ಹತ್ಯೆಗೊಳಗಾದ ಉಡುಪಿಯ ಕೆಂಜೂರು ನಿವಾಸಿ ಪ್ರವೀಣ್‌ ಪೂಜಾರಿಯ ಫೋಟೊ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂದು ಅರೋಪಿಸಿ ಆರೆಸ್ಸೆಸ್ ಕಾರ್ಯಕರ್ತ ಉಡುಪಿಯ ಕೆಂಜೂರು ನಿವಾಸಿ ಪ್ರವೀಣ್‌ ಪೂಜಾರಿಯನ್ನು 2016ರ ಆಗಸ್ಟ್ ತಿಂಗಳಲ್ಲಿ  ಉಡುಪಿಯ ಸಂತೆ ಕಟ್ಟೆ ಬಳಿ  ಗೋ ರಕ್ಷಣೆಯ ಹೆಸರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಗುಂಪು ಹಲ್ಲೆ ನಡೆಸಿ,  ಅಮಾನುಷವಾಗಿ ಹತ್ಯಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿ 18 ಮಂದಿ ಹಿಂಜಾವೇ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. 

ಬಿಜೆಪಿ ಟ್ವೀಟ್ ಮಾಡಿದ್ದೇನು? : 'ಕೋಮುದ್ವೇಷಕ್ಕೆ ಬಲಿಯಾದ ನಮ್ಮ ಕಾರ್ಯಕರ್ತರ ಆತ್ಮಕ್ಕೆ ಶಾಂತಿ ನೀಡುವುದು ಬಿಜೆಪಿಯ ಬದ್ಧತೆ. ಅವರ ಸಾವಿಗೆ ನ್ಯಾಯ ದೊರಕಿಸುವ ಹಾದಿಯಲ್ಲಿ #ಪಿಎಫ್‌ಐನಿಷೇಧ ಮಾಡಲಾಗಿದೆ' ಎಂದು ಕೊಲೆಗೋಡಾದ ಪ್ರವೀಣ್ ನೆಟ್ಟಾರು, ಬೆಂಗಳೂರಿನ ರುದ್ರೇಶ್, ಬಂಟ್ವಾಳದ ಶರತ್ ಮಡಿವಾಳ ಅವರ ಫೋಟೊ ಜೊತೆಗೆ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಅವರ ಫೋಟೊ ಕೂಡ ಪ್ರಕಟಿಸಿದೆ.

ಇನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ನೋಟಿಫಿಕೇಶನ್ ನಲ್ಲಿ ಹತ್ಯೆಗೀಡಾದ ಸಂಘಪರಿವಾರ ಕಾರ್ಯಕರ್ತರ ಪಟ್ಟಿಯಲ್ಲಿ ಗೊಂದಲಗಳಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಬಿಜೆಪಿ ಇಂದು (ಗುರುವಾರ) ಮಾಡಿರುವ ಟ್ವೀಟ್ ಚರ್ಚೆಗೆ ಕಾರಣವಾಗಿದೆ. 

ಬುಧವಾರ ಪತ್ರಕರ್ತ ನವೀನ್ ಸೂರಿಂಜೆ ಅವರು ಹಾಕಿದ್ದ ಫೇಸ್ ಬುಕ್  ಪೋಸ್ಟ್ ಹೀಗಿದೆ...

'ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ನೋಟಿಫಿಕೇಶನ್ ನಲ್ಲಿ ಪಿಎಫ್ಐ ಮಾಡಿರುವ ಕೊಲೆಗಳ ಪಟ್ಟಿಯಲ್ಲಿ ಗೊಂದಲವಿದೆ. 2016 ರಲ್ಲಿ ಕರ್ನಾಟಕದಲ್ಲಿ ಪ್ರವೀಣ್ ಪೂಜಾರಿ ಕೊಲೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ' ಎಂದು ಹೇಳಿದ್ದಾರೆ.

2016 ರಲ್ಲಿ ಇಬ್ಬರು ಪ್ರವೀಣ್ ಪೂಜಾರಿಗಳ ಕೊಲೆ ನಡೆದಿದೆ. ಯಾವ ಪ್ರವೀಣ್ ಪೂಜಾರಿ ? ಉಡುಪಿ ಪ್ರವೀಣ್ ಪೂಜಾರಿಯೋ ? ಕುಶಾಲನಗರ ಪ್ರವೀಣ್ ಪೂಜಾರಿಯೋ ಎಂಬ ಸ್ಪಷ್ಟನೆ ಇರಬೇಕಿತ್ತು.

ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂದು ಆರೆಸ್ಸೆಸ್ ಕಾರ್ಯಕರ್ತ ಉಡುಪಿಯ ಕೆಂಜೂರು ಪ್ರವೀಣ್‌ ಪೂಜಾರಿಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಸಂಘಟನೆಯ 18 ಮಂದಿಯನ್ನು ಬಂಧಿಸಲಾಗಿತ್ತು. ಕೊಲೆಯಾದ ದನದ ವ್ಯಾಪಾರಿ ಮತ್ತು ಕೊಲೆ ನಡೆಸಿದವರೆಲ್ಲರೂ ಹಿಂದುತ್ವ ಕಾರ್ಯಕರ್ತರಾಗಿದ್ದರು.

2016ರ ಆಗಸ್ಟ್ 14ರ ರಾತ್ರಿ ಅಖಂಡ ಭಾರತ ಸಂಕಲ್ಪ ಯಾತ್ರೆ ಮುಗಿಸಿ ಹಿಂತಿರುಗುವ ವೇಳೆ ಬಾಡಿಗೆಯ ನೆಪದಲ್ಲಿ ಆಟೋದಲ್ಲಿ ಕರೆದೊಯ್ದು ಗುಡ್ಡೆಹೊಸೂರು ಸಮೀಪ ಪ್ರವೀಣ್ ಪೂಜಾರಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಎಲ್ಲಾ ಆರೋಪಿಗಳು ಸೂಕ್ತ ಸಾಕ್ಷ್ಯಾಧಾರ ಇಲ್ಲದೇ ನ್ಯಾಯಾಲಯದಲ್ಲಿ ಆರೋಪ ಮುಕ್ತರಾಗಿದ್ದಾರೆ. ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯದಲ್ಲೇ ಪ್ರಶ್ನಿಸಬೇಕು. ಅದನ್ನು ಬಿಟ್ಟು ನ್ಯಾಯಾಲಯದಲ್ಲಿ ಆರೋಪಮುಕ್ತವಾದರೂ ಅದನ್ನೇ ಮತ್ತೆ ಆರೋಪಿಸಿ ಕ್ರಮ ಕೈಗೊಳ್ಳಲು ಅವಕಾಶ ಇದ್ಯಾ ? ಹಾಗಾಗಿ ಯಾವ ಪ್ರವೀಣ್ ಪೂಜಾರಿ ಎಂಬುದನ್ನು ಕೇಂದ್ರ ಗೃಹ ಇಲಾಖೆ ಸ್ಪಷ್ಟವಾಗಿ ಹೇಳಬೇಕಿತ್ತು. ಎಂದು ಅವರು ಬರೆದುಕೊಂಡಿದ್ದಾರೆ. 

►update: ವಿವಾದದ ಬಳಿಕ ಬಿಜೆಪಿ ಮೇಲಿನ ಟ್ವೀಟ್ ಅನ್ನು ಅಳಿಸಿ ಹಾಕಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News