ಕಾರಾಗೃಹದಿಂದಲೇ ಚೆಕ್ ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಶ್ರೀ: ಹೈಕೋರ್ಟ್ ಅತೃಪ್ತಿ

Update: 2022-09-29 12:32 GMT

ಬೆಂಗಳೂರು, ಸೆ.29: ಪೋಕ್ಸೊ ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಶರಣರು ಕಾರಾಗೃಹದಿಂದಲೇ ಮಠದ ಬ್ಯಾಂಕ್ ಖಾತೆಗಳ ಚೆಕ್‌ಗಳಿಗೆ ಸಹಿ ಹಾಕಲು ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಹೈಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಜತೆಗೆ, ಸಿಬ್ಬಂದಿಗೆ ವೇತನ ಪಾವತಿಸುವ ಸಂಬಂಧ ಮೆಮೊ ಸಲ್ಲಿಸುವಂತೆ ಮುರುಘಾ ಶ್ರೀಗಳ ಪರ ವಕೀಲರಿಗೆ ಸೂಚನೆ ನೀಡಿದೆ. 

ಈ ಸಂಬಂಧ ಆರೋಪಿ ಮುರುಘಾ ಶ್ರೀ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲೆ ಸ್ವಾಮಿನಿ ಗಣೇಶ್ ಮೋಹನಂಬಾಳ್ ಅವರು, ಮುರುಘಾ ಶ್ರೀಗಳು ಯಾವೆಲ್ಲಾ ಚೆಕ್‌ಗಳಿಗೆ ಸಹಿ ಹಾಕುತ್ತಾರೆಯೆಂಬ ದಾಖಲೆಗಳನ್ನು ಪೀಠಕ್ಕೆ ಮಂಡಿಸಿದರು. 

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಮಠದ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಂಬಳ ನೀಡಬೇಕಾದ ಚೆಕ್‌ಗಳು ಸೆಲ್ಫ್ ಎಂದು ತೋರಿಸುತ್ತಿದ್ದೀರಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿತು. 30 ಲಕ್ಷ ರೂ.ಮೊತ್ತದ ಚೆಕ್‌ಗಳನ್ನು ಸೆಲ್ಫ್ ಎಂದು ನಮೂದಿಸಿಕೊಂಡು ಬಂದಿದ್ದು, ಇದು ಯಾಕೋ ಸರಿ ಕಾಣಿಸುತ್ತಿಲ್ಲ. ಅಲ್ಲದೆ, ಚೆಕ್ ಸಹಿಗಳಿಗೆ ಸಂಬAಧಿಸಿದAತೆ ಸೆಷನ್ಸ್ ಕೋರ್ಟ್ಗೆ ತಕ್ಷಣವೇ ಪರಿಶೀಲಿಸುವಂತೆ ಆದೇಶ ನೀಡುತ್ತೇನೆ ಎಂದು ನ್ಯಾಯಪೀಠವು ತಿಳಿಸಿತು.

ಸಿಬ್ಬಂದಿಗೆ ವೇತನ ಪಾವತಿಸುವ ಸಂಬಂಧ ಮೆಮೊ ಸಲ್ಲಿಸುವಂತೆ ಮುರುಘಾ ಶ್ರೀಗಳ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಸೆ.30(ಶುಕ್ರವಾರ)ಕ್ಕೆ ಮುಂದೂಡಿತು. 

ಪ್ರಕರಣವೇನು?: ಮುರುಘಾ ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಯಲ್ಲಿ 3,500ಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ವೇತನ ನೀಡಬೇಕಾದರೆ ಮಠದ ಏಕೈಕ ಟ್ರಸ್ಟಿ ಆಗಿರುವ ಶಿವಮೂರ್ತಿ ಶರಣರು ಚೆಕ್‌ಗಳಿಗೆ ಸಹಿ ಮಾಡಬೇಕು. ಪ್ರತಿ ತಿಂಗಳು 200 ಚೆಕ್‌ಗಳಿಗೆ ಸಹಿ ಮಾಡಬೇಕು. ಇಲ್ಲವಾದಲ್ಲಿ ವೇತನ ಬಿಡುಗಡೆ ಆಗುವುದಿಲ್ಲ. ಹೀಗಾಗಿ, ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಕರ್ನಾಟಕ ಕಾರಾಗೃಹ ಕಾಯಿದೆ 1963ರ ಸೆಕ್ಷನ್ 40ರ ಅಡಿ ಅರ್ಜಿದಾರರು ವಿಚಾರಣಾಧೀನ ಕೈದಿಯಾಗಿದ್ದು, ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News