‘ಭಾರತ್ ಜೋಡೋ' ಪಾದಯಾತ್ರೆ ನಾಳೆ ಕರ್ನಾಟಕ ಪ್ರವೇಶ; ಸ್ವಾಗತಕ್ಕೆ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಸಿದ್ಧತೆ

Update: 2022-09-29 13:40 GMT

ಬೆಂಗಳೂರು, ಸೆ. 29: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವ ‘ಭಾರತ ಐಕ್ಯತಾ' ಪಾದಯಾತ್ರೆ ನಾಳೆ(ಸೆ.30) ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಲಿದ್ದು,ಯಾತ್ರೆಯ ಅದ್ದೂರಿ ಸ್ವಾಗತಕ್ಕೆ ಕಾಂಗ್ರೆಸ್ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ.

ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಮೂಲಕ ಹಾದು ಹೋಗಲಿದ್ದು, ಸೆ.7ರಿಂದ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ‘ಭಾರತ್ ಜೋಡೋ' ಪಾದಯಾತ್ರೆ ಯಶಸ್ವಿಗೆ ಈಗಾಗಲೇ ಪಕ್ಷದ ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಸೆ.30ರಂದು ಕೇರಳದಿಂದ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಆಗಮಿಸಲಿದ್ದು, ಯಾತ್ರೆ ಸ್ವಾಗತಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಶಾಸಕರು, ಮೇಲ್ಮನೆ ಸದಸ್ಯರು ಸೇರಿದಂತೆ ಮುಖಂಡರು ಭಾಗವಹಿಸಲಿದ್ದಾರೆ.ಪ್ರತಿನಿತ್ಯ 20ರಿಂದ 25 ಕಿ.ಮೀ ನಷ್ಟು ಪಾದಯಾತ್ರೆ ಸಾಗಲಿದ್ದು, ರಾಜ್ಯದ ಎಂಟು ಜಿಲ್ಲೆಗಳಲ್ಲಿ ಒಟ್ಟು 511 ಕಿ.ಮೀ ಪಾದಯಾತ್ರೆ ಸಂಚರಿಸಲಿದೆ.

ಅ.19ರ ವರೆಗೆ ಒಟ್ಟು 21 ದಿನಗಳ ಕಾಲ ‘ಭಾರತ್ ಜೋಡೋ' ಪಾದಯಾತ್ರೆ ರಾಜ್ಯದಲ್ಲಿ ನಡೆಯಲಿದೆ. ಅ.4 ಮತ್ತು 5ರಂದು ದಸರಾ ಉತ್ಸವದ ಹಿನ್ನೆಲೆಯಲ್ಲಿ ಯಾತ್ರೆಗೆ ವಿರಾಮ ನೀಡಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಬೃಹತ್ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಶಕ್ತಿಪ್ರದರ್ಶನ ನಡೆಸಲು ಸಿದ್ದತೆ ಮಾಡಿಕೊಂಡಿದೆ.

ಇದನ್ನೂ ಓದಿ: ಗುಂಡ್ಲುಪೇಟೆ | ರಾಹುಲ್, ಸಿದ್ದರಾಮಯ್ಯ, ಡಿಕೆಶಿ, ಪುಟ್ಟರಂಗಶೆಟ್ಟಿ ಫ್ಲೆಕ್ಸ್ ಹರಿದ ಕಿಡಿಗೇಡಿಗಳು 

.ಬಿಜೆಪಿ ಸ್ಯಾಡಿಸ್ಟ್ ಮನಸ್ಥಿತಿ: ‘ನಾಳೆಯಿಂದ ಕರ್ನಾಟಕದಲ್ಲಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆ ಆರಂಭವಾಗಲಿದೆ. ಇನ್ನೊಂದು ದಿನದಲ್ಲಿ ರಾಹುಲ್ ಗಾಂಧಿ ಅವರು ಕರುನಾಡಿಗೆ ಆಗಮಿಸುತ್ತಿದ್ದಾರೆ.  ಬನ್ನಿ ಭಾಗವಹಿಸಿ. ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕೋಣ. ಸಂವಿಧಾನವನ್ನು ಉಳಿಸೋಣ. ದೇಶವನ್ನು ಮುನ್ನಡೆಸೋಣ. ಬಿಜೆಪಿಗೆ ಎಂದೂ ಜೋಡಿಸುವುದು, ಕಟ್ಟುವುದು ತಿಳಿದಿಲ್ಲ, ಅವರದ್ದೇನಿದ್ದರೂ ಒಡೆಯುವ, ಕೆಡವುವ ಸಂಸ್ಕøತಿ. ಭಾರತ್ ಜೋಡೋ ಪಾದಯಾತ್ರೆಯ ಯಶಸ್ಸನ್ನು ಸಹಿಸದ ಬಿಜೆಪಿ ಹತಾಶ ಸ್ಥಿತಿಗೆ ತಲುಪಿ ತನ್ನೊಳಗಿನ ಸ್ಯಾಡಿಸ್ಟ್ ಮನಸ್ಥಿತಿಯನ್ನು ಬ್ಯಾನರ್‍ಗಳ ಮೇಲೆ ತೋರಿಸುತ್ತಿದೆ.ಕೈಲಾಗದವರು ಮೈ ಪರಚಿಕೊಳ್ಳುವುದು ಎಂದರೆ ಇದೇ ಅಲ್ಲವೇ?'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News