ರಾಜ್ಯದಲ್ಲಿ ನೀರಿನ ಸಮಸ್ಯೆ ಇಲ್ಲ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

Update: 2022-09-29 13:13 GMT

ಬೆಂಗಳೂರು,ಸೆ. 29: ‘ರಾಜ್ಯದಲ್ಲಿ ಮೂರು ವರ್ಷಗಳಿಂದ ವ್ಯಾಪಕ ಮಳೆಯಾಗಿದ್ದು, ಬಹುತೇಕ ಎಲ್ಲ ಜಲಾಶಯಗಳಯ ಭರ್ತಿಯಾಗಿದ್ದು, ಕೆರೆಗಳನ್ನು ತುಂಬಿಸಿದ್ದರಿಂದ ರಾಜ್ಯದಲ್ಲಿ ನೀರನ ಸಮಸ್ಯೆ ಇಲ್ಲ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಇದೀಗ ಟ್ಯಾಂಕರ್ ಮೂಲಕ ನೀರು ಒದಗಿಸುವ ಕಾರ್ಯವನ್ನು ನಿಲ್ಲಿಸಿದ್ದು, ಎಲ್ಲ ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಲಭ್ಯವಾಗಿದ್ದರಿಂದ ಕರ್ನಾಟಕ  ಪ್ಲೋರೈಡ್ ನೀರಿನಿಂದ ಮುಕ್ತವಾಗಿದೆ. ಮಾತ್ರವಲ್ಲ ಇದೇ ವೇಳೆ ಅಂತರ್ಜಲ ಮಟ್ಟವೂ ಶೇ.40ರಿಂದ 50ರಷ್ಟು ಹೆಚ್ಚಾಗಿದೆ' ಎಂದು ವಿವರಿಸಿದರು.

‘ಇದೇ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಕಾಪಾಡಿಕೊಳ್ಳಬೇಕೆಂಬ ಕಾರಣದಿಂದ ನದಿ ಪಾತ್ರದಿಂದ ಎಲ್ಲ 17ಸಾವಿರ ಕೆರೆಗಳನ್ನು ಭರ್ತಿ ಮಾಡುವ ಕೆಲಸ ಆರಂಭವಾಗಿದೆ. ಸಣ್ಣ ನೀರಾವರಿ ಇಲಾಖೆ ಹೊರತುಪಡಿಸಿ ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಈ ಪ್ರಮಾಣದ ಕೆರೆಗಳಿದ್ದು ಈ ಪೈಕಿ 1,298 ಕೆರೆಗಳು ಈಗಾಗಲೇ ಭರ್ತಿಯಾಗಿವೆ.3,204 ಕೆರೆಗಳನ್ನು ಭರ್ತಿ ಮಾಡುವ ಕೆಲಸ ನಡೆಯುತ್ತಿದೆ' ಎಂದು ಕಾರಜೋಳ ಮಾಹಿತಿ ನೀಡಿದರು.

ನೀರಿನ ಸಮಸ್ಯೆ ದೂರ: ‘ಕೆರೆ ಭರ್ತಿ ಮಾಡುವ ಯೋಜನೆಗೆ 11 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಕೆರೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಲಾಗುತ್ತದೆ. ಇದರಿಂದ ಭವಿಷ್ಯದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ದೂರವಾಗಲಿದ್ದು, ರೈತನ ಬದುಕಿಗೂ ಸಹಕಾರಿಯಾಗಲಿದೆ' ಎಂದು ಅವರು ತಿಳಿಸಿದರು.

‘ವಿವಿಧ ಜಲಾನಯನ ಪ್ರದೇಶದಲ್ಲಿ ಇನ್ನೂ 11ಲಕ್ಷ ಹೆಕ್ಟೇರ್ ನಷ್ಟು ಭೂಮಿಗೆ ನೀರು ಹರಿಸಬೇಕಾಗಿದೆ.ಮುಂದಿನ 10 ವರ್ಷಗಳಲ್ಲಿ ಸಂಪೂರ್ಣ ನೀರಾವರಿ ಸೌಲಭ್ಯ ಒದಗಿಸುವ ಕೆಲಸವಾಗಲಿದೆ. ಬೃಹತ್ ಮತ್ತು ಸಣ್ಣ ನೀರಾವರಿ ಯೋಜನೆಯಡಿ ಒಟ್ಟಾರೆ 66ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿ ಇದ್ದು,ಇದರಲ್ಲಿ 54 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಕೊಡಲು ಸಾಧ್ಯವಾಗಿದೆ.ಇದರಲ್ಲಿ ಕೃಷ್ಣಾ ನದಿ ಪಾತ್ರಕ್ಕೆ ಹೆಚ್ಚು ಭೂಮಿ ಇದೆ' ಎಂದು ತಿಳಿಸಿದರು.

ಮೇಕೆದಾಟು ಅಗತ್ಯ: ‘ಕಾವೇರಿ ನದಿ ಪಾತ್ರದಿಂದ ಈ ಬಾರಿ 273 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ತಮಿಳುನಾಡಿಗೆ 177ಟಿಎಂಸಿ ನೀರು ಹರಿಸಬೇಕಿತ್ತು.ಆದರೆ ಜೂನ್ ಒಂದರಿಂದ ನಿನ್ನೆಯ ವರೆಗೆ 450.53 ಟಿಎಂಸಿಯಷ್ಟು ನೀರು ಹರಿದು ಹೋಗಿದೆ ಎಂದು ಅವರು ಮಾಹಿತಿ ನೀಡಿದರು.

ಮೂರು ವರ್ಷಗಳಲ್ಲಿ ತಮಿಳುನಾಡಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಹೋಗಿದ್ದು,ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಉಭಯ ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ. ತಮಿಳುನಾಡಿಗೆ ನೀಡಿದ ನಂತರ ಇರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ.ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದೇವೆ. ಇದರಿಂದ ಎರಡೂ ರಾಜ್ಯಗಳಿಗೆ ಸಂಕಷ್ಟದ ಸಂದರ್ಭದಲ್ಲಿ ಅನುಕೂಲ ಆಗಲಿದೆ' ಎಂದು ಕಾರಜೋಳ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News