ಬಿಜೆಪಿ-ಎಸ್‍ಡಿಪಿಐ ನಡುವಿನ ಒಳ ಒಪ್ಪಂದ ಏನು?: ಸ್ವತಂತ್ರ ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

Update: 2022-09-29 18:26 GMT

ಬೆಂಗಳೂರು, ಸೆ.29: ಬಿಜೆಪಿ ಮತ್ತು ಎಸ್‍ಡಿಪಿಐ ನಡುವಿನ ಒಳ ಒಪ್ಪಂದ ಏನು? ಯಾವ ಯಾವ ಚುನಾವಣೆಯಲ್ಲಿ ಇಬ್ಬರ ನಡುವೆ ಯಾವ ಯಾವ ರೀತಿಯ ಪರಸ್ಪರ ಸಹಕಾರ ಏರ್ಪಟ್ಟಿದೆ ಎನ್ನುವ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಯಾಗಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

‘ಪಿಎಫ್‍ಐ ಮತ್ತು ಎಸ್‍ಡಿಪಿಐ ಎರಡಕ್ಕೂ ಬಿಜೆಪಿಯೇ ಪೋಷಕ. ಬಿಜೆಪಿಯಿಂದಲೇ ಈ ಎರಡೂ ಬೆಳೆದಿವೆ’ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದರು. ಪಿಎಫ್‍ಐ ಮತ್ತು ಎಸ್‍ಡಿಪಿಐ ಎರಡೂ ಬಿಜೆಪಿಯ ‘ಬಿ’ ಟೀಮ್ ಎಂದು ಸತ್ಯಜಿತ್ ಸುರತ್ಕಲ್ ಹೇಳಿಕೆ ನೀಡಿದ್ದರು. ಇವರಿಬ್ಬರ ಹೇಳಿಕೆಯನ್ನು ಈವರೆಗೆ ಬಿಜೆಪಿ, ಸಂಘ ಪರಿವಾರ ಅಲ್ಲಗಳೆದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸರಕಾರಕ್ಕೆ ತಕ್ಷಣ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ. ಸತ್ಯಜಿತ್ ಸುರತ್ಕಲ್ ಮತ್ತು ಪ್ರಮೋದ್ ಮುತಾಲಿಕ್ ಅವರ ಹೇಳಿಕೆಗಳ ಕುರಿತಾಗಿಯೂ ತನಿಖೆ ನಡೆಯಲಿ. ತನಿಖೆಯಲ್ಲಿ ಹೊರಗೆ ಬರುವ ಸಂಗತಿಗಳನ್ನು ನಾಡಿನ ಜನರ ಮುಂದಿಡಿ ಎಂದು ಒತ್ತಾಯಿಸಿರುವ ಅವರು, ಪಿಎಫ್‍ಐ, ಎಸ್‍ಡಿಪಿಐ ಚಟುವಟಿಕೆಗಳಿಂದ ಅತ್ಯಂತ ಹೆಚ್ಚು ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಬಿಜೆಪಿಯೇ ಎನ್ನುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

‘ಸುಳ್ಳು’ ಬಿಜೆಪಿ ಮತ್ತು ಸಂಘ ಪರಿವಾರದವರ ಮನೆ ದೇವರು. ಆಧಾರ ರಹಿತ ಸುಳ್ಳು ಪ್ರಚಾರಗಳಿಂದಲೇ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಈ ಪರಿವಾರ ನನ್ನ ವಿರುದ್ಧ ಇದುವರೆಗೂ ಸಾವಿರದೊಂದು ಸುಳ್ಳುಗಳನ್ನು ಪ್ರಚಾರ ಮಾಡಿದೆ. ಈ ಸುಳ್ಳುಗಳಲ್ಲಿ ಪಿಎಫ್‍ಐ ಸಂಘಟನೆ ನನ್ನಿಂದಲೇ ಬೆಳೆದಿದ್ದು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪಿಎಫ್‍ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ಸುಳ್ಳು ಉದುರಿಸಿಕೊಳ್ಳುತ್ತಾ ತಿರುಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಈ ಸಂಬಂಧ ಬಿಜೆಪಿ ಸರಕಾರಕ್ಕೆ ನಾನು ನಾಲ್ಕು ಪತ್ರಗಳನ್ನು ಬರೆದು ಪಶ್ನೆಗಳನ್ನು ಕೇಳಿದ್ದೇನೆ. ನನ್ನ ಪ್ರಶ್ನೆಗಳಿಗೆ ಬಿಜೆಪಿ ಸರಕಾರವೇ ನೀಡಿರುವ ಉತ್ತರದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಯಾವುದೇ ಪಿಎಫ್‍ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದರ ಬಗ್ಗೆ ಉಲ್ಲೇಖಗಳೇ ಇಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತ, ದಲಿತ, ಕಾರ್ಮಿಕ, ಕಮ್ಯುನಿಸ್ಟ್ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರಕಾರವೇ ಉತ್ತರಿಸಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಅವಧಿಯಲ್ಲಿ ಹಿಂದಕ್ಕೆ ಪಡೆಯಲಾದ ಪ್ರಕರಣಗಳಲ್ಲಿ ಪಿಎಫ್‍ಐ ಕಾರ್ಯಕರ್ತರು ಆರೋಪಿಗಳಾಗಿದ್ದರು ಎನ್ನುವುದರ ಬಗ್ಗೆ ಬಿಜೆಪಿ ಸರಕಾರ ಕೊಟ್ಟ ಉತ್ತರದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಹೀಗಾಗಿ ಬಿಜೆಪಿ ಮತ್ತು ಪರಿವಾರದ ಮಂದಿ ಸಾರ್ವಜನಿಕವಾಗಿ ಸುಳ್ಳನ್ನೇ ಆರಾಧಿಸುತ್ತಾ, ಸುಳ್ಳನ್ನೇ ಭಜಿಸುತ್ತಾ, ಸುಳ್ಳನ್ನೇ ತೀರ್ಥ ಪ್ರಸಾದದಂತೆ ಹಂಚುತ್ತಾ ತಿರುಗುವುದನ್ನು ನಿಲ್ಲಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಯಾವ ಪಿಎಫ್‍ಐ ಕಾರ್ಯಕರ್ತರ ಮೇಲಿನ ಯಾವ ಪ್ರಕರಣವನ್ನು ಕಾಂಗ್ರೆಸ್ ಅವಧಿಯಲ್ಲಿ ಹಿಂದಕ್ಕೆ ಪಡೆಯಲಾಗಿತ್ತು ಎನ್ನುವುದನ್ನು ಬಿಜೆಪಿ ಹೇಳಬೇಕು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರೈತರು, ಕಾರ್ಮಿಕರು, ದಲಿತರು, ಪೌರ ಕಾರ್ಮಿಕರು, ಕಬ್ಬು ಬೆಳೆಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದೇ ಹೆಚ್ಚು ಎಂದು ಅವರು ತಿಳಿಸಿದ್ದಾರೆ.

ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಮುಸ್ಲಿಮರಾಗಿದ್ದಾರೆ. ಅವರೆಲ್ಲರನ್ನೂ ಪಿಎಫ್‍ಐ ಎಂದು ಬಿಂಬಿಸಿ ತಮ್ಮ ಸುಳ್ಳಿನ ಭಜನೆ ಮಾಡಿದರೆ ಜನ ನಂಬುವುದಿಲ್ಲ ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News