ಜನರ ಪರ ಮಾತನಾಡಲು ಪಾದಯಾತ್ರೆಯಲ್ಲದೆ ಬೇರೆ ಮಾರ್ಗವೇ ಇಲ್ಲ: ರಾಹುಲ್ ಗಾಂಧಿ

Update: 2022-09-30 06:44 GMT

ಚಾಮರಾಜನಗರ, ಸೆ.30: ಎಐಸಿಸಿ ಮುಖಂಡ ರಾಹುಲ್ ಗಾಂಧಿ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ' ಇಂದು ಬೆಳಗ್ಗೆ ಕರ್ನಾಟಕವನ್ನು ಪ್ರವೇಶಿಸಿದೆ.

ರಾಜ್ಯದಲ್ಲಿ ಯಾತ್ರೆಯ ಮೊದಲ ಸಮಾವೇಶವು ಗುಂಡ್ಲುಪೇಟೆಯಲ್ಲಿ ಆಯೋಜಿಸಲಾಗಿದ್ದು, ಸೇರಿದ್ದ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ, ಪ್ರಸಕ್ತ ದೇಶ ಎದುರಿಸುತ್ತಿರುವ ಸಮಸ್ಯೆಗಳು, ನಡೆಯುತ್ತಿರುವ ಹಿಂಸೆ ಸೇರಿದಂತೆ ವಿವಿಧ ಗಂಭೀರ ವಿಷಯಗಳ ಬಗ್ಗೆ ಮಾತನಾಡಲು ಇರುವ ಮಾರ್ಗಗಳಾದ ದೇಶದ ಸಂಸತ್ತು, ಮಾಧ್ಯಮಗಳು ವಿರೋಧ ಪಕ್ಷದ ಪಾಲಿಗೆ‌ ಮುಚ್ಚಿವೆ. ಆದ್ದರಿಂದ ಜನರ ಬಗ್ಗೆ ಮಾತನಾಡಲು ಪಾದಯಾತ್ರೆಯಲ್ಲದೆ ಬೇರೆ ದಾರಿಯೇ ಇಲ್ಲ ಎಂದು ಹೇಳಿದರು.

ಮಾಧ್ಯಮಗಳು ಸಂಪೂರ್ಣವಾಗಿ ಸರಕಾರದ ನಿಯಂತ್ರಣದಲ್ಲಿವೆ. ನಮ್ಮ ವಿಚಾರಗಳನ್ನು ಹೇಳುವುದಕ್ಕೆ ಅಲ್ಲಿ ಅವಕಾಶ ಇಲ್ಲ. ಸಂಸತ್ತಿನಲ್ಲಿ ನಾವು ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ. ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶ ಇಲ್ಲ. ಹಾಗಾಗಿ ಈ ಪಾದಯಾತ್ರೆ ಅನಿವಾರ್ಯ ಎಂದರು.

ಈ ಯಾತ್ರೆ ದೇಶದ ಧ್ವನಿ. ನಾನೊಬ್ಬನೇ ಅಲ್ಲ.‌ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದ ಭಾವ ಇಲ್ಲ. ಸಂವಿಧಾನ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಈ ಯಾತ್ರೆಯನ್ನು ತಡೆಯಲಾಗದು ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿ, ಆರೆಸ್ಸೆಸ್ ವಿಚಾರಧಾರೆಗಳು ದೇಶದಲ್ಲಿ ದ್ವೇಷ, ಹಿಂಸೆಯನ್ನು ಸೃಷ್ಟಿಸುತ್ತಿವೆ. ದೇಶದ ಸಂವಿಧಾನ ಇಲ್ಲದಿದ್ದರೆ, ತ್ರಿವರ್ಣ ಧ್ಬಜಕ್ಕೆ ಬೆಲೆ ಇಲ್ಲ. ಸಂವಿಧಾನವನ್ಜು ರಕ್ಷಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ನುಡಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್, ಯಾತ್ರೆ ರಾಷ್ಟ್ರೀಯ ಸಂಯೋಜಕರಾದ ಯೋಗೇಂದ್ರ ಯಾದವ್, ಜೈರಾಮ್ ರಮೇಶ್, ಹಿರಿಯ ಸಾಹಿತಿ ದೇವನೂರು ಮಹದೇವ,  ಹಿರಿಯ ಮುಖಂಡರಾದ ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ಸಿ.ಮಹಾದೇವಪ್ಪ, ಸಂಸದ ಡಿ.ಕೆ.ಸುರೇಶ್, ಮುಖಂಡರಾದ ಗೀತಾ ಪ್ರಸಾದ್, ಗಣೇಶ್ ಪ್ರಸಾದ್ ಮತ್ತಿತರರು ಭಾಗಿಯಾಗಿದ್ದರು.

ಸ.7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭಗೊಂಡಿರುವ 'ಭಾರತ್ ಜೋಡೋ' ಪಾದಯಾತ್ರೆ ಕೇರಳದ ಮೂಲಕವಾಗಿ ಇಂದು ಕರ್ನಾಟಕವನ್ನು ಪ್ರವೇಶಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News