75 ವರ್ಷಗಳ ನಂತರ ಕಾಂಗ್ರೆಸ್‍ಗೆ ಜ್ಞಾನೋದಯ: ಸಚಿವ ವಿ.ಸೋಮಣ್ಣ

Update: 2022-09-30 11:45 GMT

ಬೆಂಗಳೂರು, ಸೆ. 30: ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದವರಿಗೆ ಜ್ಞಾನೋದಯವಾಗಿದೆ. ಅವರಿಗೆ ಅಭಾರಿಯಾಗಿದ್ದೇನೆ. ಭಾರತೀಯರ ಸಾರ್ವಭೌಮತೆ, ಒಡಂಬಡಿಕೆ, ದೇಶಪ್ರೇಮ, ಇವೆಲ್ಲಕ್ಕಿಂತ ಪ್ರಮುಖವಾಗಿ ಪ್ರಧಾನಿ ಮೋದಿಯವರು ವಿಶ್ವದ ಭೂಪಟದಲ್ಲಿ ಕೈಗೊಂಡ ದೂರದೃಷ್ಟಿಯ ಚಿಂತನೆಗೆ ಕವಲುದಾರಿ ತರಲು ಕಾಂಗ್ರೆಸ್ ಯಾತ್ರೆ ಹಮ್ಮಿಕೊಂಡಿದೆ' ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ್ ಜೋಡೋ ಯಾತ್ರೆ ನನ್ನ ಉಸ್ತುವಾರಿ ಜಿಲ್ಲೆಯಿಂದ ಆರಂಭವಾಗಿದೆ. ಹಿಂದೆ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ನಡೆದುಕೊಂಡು ಬಂದಿದ್ದರು. ನಾನೂ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಬಂದಿದ್ದೆ. ಇದು ಪಾದಯಾತ್ರೆ ಅಲ್ಲ, ಅಲ್ಲಲ್ಲಿ ಹತ್ತುವುದು-ಇಳಿಯುವುದು' ಎಂದು ಹೇಳಿದರು.

‘ಗುಂಡ್ಲುಪೇಟೆಯಲ್ಲಿ ಯಾತ್ರೆ ಆರಂಭಿಸಿ ಸಭೆ ನಡೆಸಿ ಅಲ್ಲಿ ಕೆಲವು ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಪ್ರಾರಂಭಿಸಿದ್ದು ಜೆ.ಎಚ್.ಪಟೇಲ್. ಆಗ ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದೆ. ಪಟೇಲರು ಚಾಮರಾಜನಗರ ಜಿಲ್ಲಾ ನಾಮಕರಣ ಮಾಡಿ ಜಿಲ್ಲಾ ಕೇಂದ್ರ ಕಟ್ಟಿದ್ದನ್ನು ಹೊರತುಪಡಿಸಿದರೆ ಮುಂದೆ ಬಂದ ಕಾಂಗ್ರೆಸ್ ಸರಕಾರ ಏನು ಮಾಡಿದೆ ಏನಿಲ್ಲ ಎಂಬ ಬಗ್ಗೆ ಚರ್ಚೆಗೆ ಸಿದ್ಧ' ಎಂದು ಸೋಮಣ್ಣ ಸವಾಲೆಸೆದರು.

‘ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಆಗುವ ಹಗಲುಕನಸು ಕಾಣುತ್ತಿರುವಂತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ಮಂದಿ ಶಾಸಕರ ಪೈಕಿ ಇಬ್ಬರು ಶಾಸಕರು ನಮ್ಮವರಿದ್ದಾರೆ. ಸ್ಥಳೀಯ ಸಂಸ್ಥೆಗಳು ನಮ್ಮ ಅಧಿಕಾರವಿದೆ. ದಲಿತರಿಗೆ ಅನ್ಯಾಯ ಮಾಡುವ ಕೂಗು ಕಾಂಗ್ರೆಸ್ಸಿಗರದು. 2018ರ ಚುನಾವಣೆಯಲ್ಲಿ ಡಾ. ಪರಮೇಶ್ವರ್ ಅವರಿಗೆ ಯಾರು ಅನ್ಯಾಯ ಮಾಡಿದರೆಂದು ನೀವೇ ನೋಡಿಕೊಳ್ಳಿ' ಎಂದು ತಿರುಗೇಟು ನೀಡಿದರು.

‘ಬಿಜೆಪಿ ಶಿಸ್ತಿನ ಪಕ್ಷ ಬ್ಯಾನರ್ ಹರಿಯುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಸ್ವಯಂಕೃತವಾಗಿ ಅವರೇನಾದರೂ ಮಾಡಿದ್ದಾರೋ ಗೊತ್ತಿಲ್ಲ. ನಾವು ಮಾಡಿದ್ದಂತೂ ಅಲ್ಲ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಮನೆಯ ಹತ್ತಿರ ಏನಾಯಿತು? ಬೆಂಕಿ ಇಟ್ಟವರು, ಮಾಡಬಾರದ್ದನ್ನು ಮಾಡಿದ್ದು ಯಾರು? ನಿಮ್ಮವರೇ ಮಾಡಿ ಇನ್ನೊಬ್ಬರಿಗೆ ಹೇಳುತ್ತೀರಲ್ಲ' ಎಂದು ಸೋಮಣ್ಣ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News