ಚೆಕ್‍ಗೆ ಸಹಿ ಹಾಕಲು ಮುರುಘಾ ಶ್ರೀಗೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

Update: 2022-09-30 15:06 GMT

ಬೆಂಗಳೂರು, ಸೆ.30: ಪೊಕ್ಸೊ ಮತ್ತು ಎಸ್ಸಿ-ಎಸ್ಟಿ ಜಾತಿನಿಂದನೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಶರಣರು ಕಾರಾಗೃಹದಿಂದಲೇ ಬ್ಯಾಂಕ್ ಖಾತೆಗಳ ಚೆಕ್‍ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ಹೈಕೋರ್ಟ್ ಷರತ್ತುಬದ್ಧ ತಾತ್ಕಾಲಿಕ ಅನುಮತಿ ನೀಡಿದೆ.  ಚೆಕ್‍ಗೆ ಸಹಿ ಹಾಕಲು ಮುರುಘಾ ಶ್ರೀಗೆ ಹೈಕೋರ್ಟ್ ಅವಕಾಶ ಕಲ್ಪಿಸಿ ಆದೇಶಿಸಿದೆ. 

ಈ ಸಂಬಂಧ ಆರೋಪಿ ಮುರುಘಾ ಶ್ರೀ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಅ.3, 6 ಮತ್ತು 10ರಂದು ಮೂರು ದಿನಗಳ ಕಾಲ ಚೆಕ್‍ಗಳಿಗೆ ಸಹಿ ಮಾಡಲು ಅವಕಾಶ ನೀಡಿ ಆದೇಶಿಸಿತು.  

ಅರ್ಜಿದಾರರ ಪರ ವಾದಿಸಿದ ವಕೀಲೆ ಸ್ವಾಮಿನಿ ಗಣೇಶ್ ಮೋಹನಂಬಾಳ್ ಅವರು, ಮುರುಘಾ ಶ್ರೀಗಳು ಯಾವೆಲ್ಲಾ ಚೆಕ್ ಗಳಿಗೆ ಸಹಿ ಮಾಡುತ್ತಾರೆ ಎಂಬ ಪರಿಷ್ಕøತ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಒಂದು ಬಾರಿಗೆ ಮಾತ್ರವೇ ಚೆಕ್ ಗಳಿಗೆ ಸಹಿ ಮಾಡಲು ಅವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು.

‘ಮುರುಘಾ ಮಠದ ಮತ್ತು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವೇತನ ಪಡೆಯಲಾಗದೇ ತೊಂದರೆಗೆ ಸಿಲುಕಬಾರದು. ಇದು ನ್ಯಾಯಪೀಠದ ಕಾಳಜಿ. ಹೀಗಾಗಿ, ತಾತ್ಕಾಲಿಕವಾಗಿ ಈ ಅನುಮತಿ ನೀಡಲಾಗುತ್ತಿದೆ. ಆದುದರಿಂದ, ಅರ್ಜಿದಾರರು ಸಹಿ ಮಾಡಿದ ಚೆಕ್ ಗಳ ವಿವರವನ್ನು ತನಿಖಾಧಿಕಾರಿಗಳಿಗೆ ನೀಡಬೇಕು. ತನಿಖಾಧಿಕಾರಿ ಈ ದಾಖಲೆಗಳನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ನಿರ್ದೇಶಿಸಿತು. 

ಪ್ರಕರಣವೇನು? : ಮುರುಘಾ ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಯಲ್ಲಿ 3,500ಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ವೇತನ ನೀಡಬೇಕಾದರೆ ಮಠದ ಏಕೈಕ ಟ್ರಸ್ಟಿ ಆಗಿರುವ ಶಿವಮೂರ್ತಿ ಶರಣರು ಚೆಕ್‍ಗಳಿಗೆ ಸಹಿ ಮಾಡಬೇಕು. ಪ್ರತಿ ತಿಂಗಳು 200 ಚೆಕ್‍ಗಳಿಗೆ ಸಹಿ ಮಾಡಬೇಕು. ಇಲ್ಲವಾದಲ್ಲಿ ವೇತನ ಬಿಡುಗಡೆ ಆಗುವುದಿಲ್ಲ. ಹೀಗಾಗಿ, ಚೆಕ್‍ಗಳಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಕರ್ನಾಟಕ ಕಾರಾಗೃಹ ಕಾಯಿದೆ 1963ರ ಸೆಕ್ಷನ್ 40ರ ಅಡಿ ಅರ್ಜಿದಾರರು ವಿಚಾರಣಾಧೀನ ಕೈದಿಯಾಗಿದ್ದು, ಚೆಕ್ ಮತ್ತು ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳ RTO  ಚೆಕ್‍ಪೋಸ್ಟ್ ಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News