ರಾಜ್ಯದ ಹಲವು ಜಿಲ್ಲೆಗಳ RTO ಚೆಕ್‍ಪೋಸ್ಟ್ ಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ

Update: 2022-09-30 14:47 GMT

ಬೆಂಗಳೂರು, ಸೆ.30: ರಾಜ್ಯದ ಹಲವು ಜಿಲ್ಲೆಗಳ ಆರ್‍ಟಿಒ ಚೆಕ್‍ಪೋಸ್ಟ್  ಗಳ ಮೇಲೆ ಏಕಕಾಲಕ್ಕೆ ಶುಕ್ರವಾರ ಬೆಳಗಿನ ಜಾವ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 10ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತದ ನಗದನ್ನು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ, ಕೆಲ ಚೆಕ್‍ಪೋಸ್ಟ್ ನಲ್ಲಿ ಸಿಬ್ಬಂದಿಯೇ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಚೆಕ್‍ಪೋಸ್ಟ್ ಗಳಲ್ಲಿ ಮಧ್ಯವರ್ತಿಗಳು ಹಾಗೂ ಲಂಚಕ್ಕೆ ಬೇಡಿಕೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸುಮೋಟೋ(ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ವಿವಿಧ ಜಿಲ್ಲೆಗಳಲ್ಲಿನ ಆರ್‍ಟಿಒ ಚೆಕ್‍ಪೋಸ್ಟ್‍ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಬೆಂಗಳೂರು, ವಿಜಯಪುರ, ಚಿಕ್ಕಾಬಳ್ಳಪುರ, ಬೆಳಗಾವಿ, ಕೋಲಾರ, ಹೊಸಪೇಟೆ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳ ಪ್ರಮುಖ ಚೆಕ್‍ಪೋಸ್ಟ್ ಗಳ ಮೇಲೆ ಈ ದಾಳಿ ನಡೆದಿದ್ದು, ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ.ಬೆಂಗಳೂರಿನ ಅತ್ತಿಬೆಲೆ ಬಳಿ ಇರುವ ಆರ್‍ಟಿಓ ಕಚೇರಿಗೆ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ತಮಿಳುನಾಡು-ಕರ್ನಾಟಕ ಗಡಿ ಚೆಕ್‍ಪೋಸ್ಟ್ ಆಗಿರುವ ಹಿನ್ನೆಲೆಯಲ್ಲಿ ಇಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ರಹದಾರಿ ಹಾಗೂ ತೆರಿಗೆ ಪಾವತಿಸಿರುವ ಬಗ್ಗೆ ಸರಿಯಾದ ದಾಖಲೆಗಳನ್ನು ಪರಿಶೀಲಿಸದೇ ಲಂಚ ಪಡೆದು ಕೆಲ ವಾಹನಗಳನ್ನು ಬಿಡುತ್ತಿರುವ ಬಗ್ಗೆ ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. 

ಇನ್ನು ಪದೇ ಪದೇ ಅಕ್ರಮದ ಕೇಂದ್ರ ಬಿಂದು ಎಂದು ಹೇಳಲಾಗಿರುವ ಹೊಸಪೇಟೆಯ ಜಳಕಿ ಚೆಕ್‍ಪೋಸ್ಟ್ ಬಳಿ ತಲೆಗೆ ರೂಮಾಲು ಕಟ್ಟಿಕೊಂಡು ನಿಂತಿದ್ದ ಲೋಕಾಯುಕ್ತ ಅಧಿಕಾರಿಗಳ ಹಾಗೂ ಸಿಬ್ಬಂದಿ ಈ ಮಾರ್ಗದಲ್ಲಿ ಬರುವ ವಾಹನಗಳ ಮೇಲೆ ನಿಗಾ ವಹಿಸಿ ನಂತರ ನಂತರ ಕಚೇರಿಗಳಿಗೆ ಎಂಟ್ರಿ ಕೊಟ್ಟು ಅಲ್ಲಿದ್ದ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದಾರೆ. 

ಬೆಳಗಾವಿಯ ನಿಪ್ಪಾಣಿ ಬಳಿ ಚೆಕ್‍ಪೋಸ್ಟ್, ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಚೆಕ್‍ಪೋಸ್ಟ್, ಕೋಲಾರದ ನಂಗ್ಲಿ ಚೆಕ್‍ಪೋಸ್ಟ್, ಬಳ್ಳಾರಿ, ಕೊಪ್ಪಳ ಹಾಗೂ ಮೈಸೂರು ಬಳಿಯ ಗುಂಡ್ಲುಪೇಟೆ ಚೆಕ್‍ಪೋಸ್ಟ್, ಮತ್ತು ಬೀದರ್ ಹುಮ್ನಾಬಾದ್ ಚೆಕ್‍ಪೋಸ್ಟ್ ಮೇಲೆ ದಾಳಿ ನಡೆದಿದೆ.

10 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತ ಜಪ್ತಿ: ಬೆಂಗಳೂರಿನ ಅತ್ತಿಬೆಲೆ ಚೆಕ್‍ಪೋಸ್ಟ್ ನ ಮೇಲೆ ದಾಳಿ ನಡೆಸಿದ್ದು, ಈ ವೇಳೆ 62,227 ರೂ.ಅಕ್ರಮ ಹಣವನ್ನು ಜಪ್ತಿ ಮಾಡಲಾಗಿದೆ. ಶೋಧನೆಯ ವೇಳೆಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕಿ ಲಕ್ಷ್ಮಿ ಅವರು ಚೆಕ್‍ಪೆÇೀಸ್ಟ್‍ನ ಕಿಟಕಿಯಿಂದ ಹೊರಗಡೆ 14 ಸಾವಿರ ರೂ. ಅಕ್ರಮ ಹಣವನ್ನು ಎಸೆದರು. ತಕ್ಷಣ ಪೊಲೀಸರು  ಕಾರ್ಯೋನ್ಮುಖರಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿಜಯಪುರದ ಧೂಳ್‍ಖೇಡ್ ಚೆಕ್‍ಪೋಸ್ಟ್ ನಲ್ಲಿ 4.53 ಲಕ್ಷ ರೂ.ಅಕ್ರಮ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿಯ ಕೊಂಗನಹಳ್ಳಿ ಚೆಕ್‍ಪೋಸ್ಟ್ ನಲ್ಲಿ 3.62 ಲಕ್ಷ ರೂ., ಬೀದರ್‍ನ ಬೋಲ್ಕೆರೆ ಚೆಕ್‍ಪೋಸ್ಟ್ ಲ್ಲಿ 1,54 ಲಕ್ಷ ರೂ., ಬಳ್ಳಾರಿಯ ಗೋದಾಳ್ ಚೆಕ್‍ಪೋಸ್ಟ್ ನಲ್ಲಿ 54,900 ರೂ.ನಗದು, ಚಾಮರಾಜನಗರದ ಗುಂಡ್ಲುಪೇಟೆ ಚೆಕ್‍ಪೋಸ್ಟ್ ನಲ್ಲಿ 9,779 ರೂ. ಮತ್ತು ಕೋಲಾರದ ನಂಗ್ಲಿ ಚೆಕ್‍ಪೋಸ್ಟ್ ನಲ್ಲಿ 6,584 ರೂ. ನಗದು ಪತ್ತೆಯಾಗಿದೆ.

ಲೋಕಾಯುಕ್ತ ಪೊಲೀಸರ ಶೋಧ ಕಾರ್ಯದಲ್ಲಿ ಒಟ್ಟು 10,87,274 ರು. ಜಪ್ತಿ ಮಾಡಲಾಗಿದೆ. ಇನ್ನು, ವಿಜಯನಗರದ ಹೊಸಪೇಟೆ ಚೆಕ್‍ಪೋಸ್ಟ್, ಕೊಪ್ಪಳದ ಬೂದಗುಂಬ ಚೆಕ್‍ಪೋಸ್ಟ್ ಮತ್ತು ಕೋಲಾರ ಜಿಲ್ಲೆ ನಂಗ್ಲಿ ಚೆಕ್‍ಪೋಸ್ಟ್ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ  ಚೆಕ್‍ಪೋಸ್ಟ್ ನಲ್ಲಿ ಯಾವುದೇ ಅಧಿಕಾರಿ/ಸಿಬ್ಬಂದಿ ಇರಲಿಲ್ಲ ಎಂಬುದು ಗೊತ್ತಾಗಿದ್ದು, ಈ ಬಗ್ಗೆ ಮುಂದಿನ ಕ್ರಮ ಜರುಗಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News