ಚಿಕ್ಕಮಗಳೂರು: ಹೈಕೋರ್ಟ್ ಆದೇಶ ಮೀರಿ ಬೈಪಾಸ್ ಅಗಲೀಕರಣಕ್ಕೆ ದಲಿತರ ಮನೆಗಳ ಧ್ವಂಸ; ಆರೋಪ

Update: 2022-09-30 15:05 GMT

ಚಿಕ್ಕಮಗಳೂರು: ಸೆ.30. ಹೈಕೋರ್ಟ್  ಆದೇಶವನ್ನು ಉಲ್ಲಂಘಿಸಿ ಬೈಪಾಸ್ ರಸ್ತೆಯ ಚಿಕ್ಕಕುರುಬರಹಳ್ಳಿಯಲ್ಲಿ ಪರಿಶಿಷ್ಟರ ಮನೆಗಳನ್ನು ಅಧಿಕಾರಿಗಳು ಧ್ವಂಸ ಮಾಡಿದ್ದು, ಈ ಅಧಿಕಾರಿಗಳ ವಿರುದ್ದ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು.

ನಗರದ ಆಝಾದ್ ಪಾರ್ಕ್ ಬಳಿ ಸಂತ್ರಸ್ತ ಕುಟುಂಬಗಳೊಂದಿಗೆ ಧರಣಿ ನಡೆಸಿದ ದಸಂಸ ಮುಖಂಡರು, ಕಾರ್ಯಕರ್ತರು ಅಕ್ರಮವಾಗಿ ಮನೆ ಒಡೆದಿರುವ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೊಂದ  ದಲಿತ ಕುಟುಂಬಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್, 'ನಗರದ ಬೈಪಾಸ್ ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಿಲ್ಲ. ಕುಟುಂಬಗಳು ನ್ಯಾಯಾಲದ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೆ ಉಚ್ಚನ್ಯಾಯಾಲಯದ ಆದೇಶವಿದ್ದರೂ ನಗರಸಭೆ ಅಧಿಕಾರಿಗಳು ಮತ್ತು ಇಂಜಿನಿಯರ್ ಬೆಳಗಿನ ಜಾವ ನಿದ್ದೆಯಿಂದ ಏಳುವ ಮುನ್ನವೇ ಪರಿಶಿಷ್ಟರ ಮನೆಗಳನ್ನು ಜೆಸಿಬಿ ಯಂತ್ರದಿಂದ ನಾಶಗೊಳಿಸಿ ದಲಿತ ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ. ಮೇಲ್ವರ್ಗದವರ ಮನೆಗಳನ್ನು ಬಿಟ್ಟು ಮಾದಿಗ ಸಮಾಜದವರ ಮನೆಗಳನ್ನು ಮಾತ್ರ ಒಡೆದು ಹಾಕುವ ಮೂಲಕ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ. ದೌರ್ಜನ್ಯ ಎಸಗಿರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಇದುವರೆಗೂ ಬಂಧಿಸಿಲ್ಲ' ಎಂದು ದೂರಿದರು.

'ಪರಿಶಿಷ್ಟರ ಮನೆಗಳು ಧ್ವಂಸವಾಗಿ 5 ದಿನಗಳಾಗಿದ್ದರೂ ಸ್ಥಳೀಯ ಶಾಸಕರು ಮತ್ತು ಮೇಲಾಧಿಕಾರಿಗಳು ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿz ಅವರು, ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಸಂತ್ರಸ್ತರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡವುದರ ಜೊತೆಗೆ ಮನೆ ನಿರ್ಮಿಸಿ ಕೊಡಬೇಕು' ಎಂದು ಆಗ್ರಹಿಸಿದರು

ಸಮಿತಿಯ ವಿಭಾಗಿಯ ಸಂಚಾಲಕ ಮಂಜಪ್ಪ ಮಾತನಾಡಿ, ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಧರಣಿ ನಂತರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಬಿ.ಈಶ್ವರಪ್ಪ ಹಿರಿಯ ಮುಖಂಡ ಎಚ್.ಎಂ.ರುದ್ರಸ್ವಾಮಿ, ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಹಿರೇಮಗಳೂರು ರಮೇಶ್, ಪಿ.ಶಿವಪ್ರಸಾದ್, ಈಶಣ್ಣ, ಓಂಕಾರಪ್ಪ, ಪರಮೇಶ್, ಟಿ.ಲಕ್ಷ್ಮಣ್ ಸಂತ್ರಸ್ತರಾದ ನಂಜುಂಡಪ್ಪ, ಲೋಕೇಶ್, ಅಖಿಲ, ಕೆಂಚಮ್ಮ, ರಾಜಪ್ಪ, ಮಂಜುಳಾ, ಕೃಷ್ಣಮೂರ್ತಿ, ದಯಾನಂದ ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News