ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ: 20 ವರ್ಷಗಳ ನೇಮಕಾತಿಗಳನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹ

Update: 2022-09-30 15:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.30: ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮಗಳು ಬಯಲಿಗೆ ಬಂದಿದ್ದು, 2001ರಿಂದ 2021ರವರೆಗೆ ನಡೆದ ಎಲ್ಲ ಶಿಕ್ಷಕರ ನೇಮಕಾತಿಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸಿದೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನಯ್ಯ ಬಿ.ಎಸ್., ‘ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಎಲ್ಲ ವಿಷಯವಾರು ಬೌದ್ಧಿಕ ಪರಿಜ್ಞಾನ ಮತ್ತು ಪಾಠ ಪ್ರವಚನ ಪರಿಶೀಲನೆ ನಡೆಸಬೇಕು. ಈ ಸಂಬಂಧ ಮೂರು ತಿಂಗಳ ಕಾಲಮಿತಿಯೊಳಗೆ ಸೂಕ್ತ ಪರೀಕ್ಷೆಯನ್ನು ನಡೆಸಿ ಅಸಮರ್ಥರಾದ ಅಕ್ರಮ ನೇಮಕಗೊಂಡವರನ್ನು ಪತ್ತೆ ಮಾಡಬೇಕಾಗಿದೆ’ ಎಂದು ಹೇಳಿದರು.

‘ಮಂಜೂರಾದ ಹುದ್ದೆಗಳಿಗೆ ಎದುರಾಗಿ ಎಷ್ಟು ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಭರ್ತಿಯಾಗದೇ ಉಳಿಕೆ ಆಗಿರುವ ಹುದ್ದೆಗಳನ್ನು ಸರಕಾರಕ್ಕೆ ಮರಳಿಸಿರುವ ಸಂಖ್ಯೆ ಪತ್ತೆಯಾಗಬೇಕಾಗಿದೆ. ಉಳಿಕೆಯಾದ ಹುದ್ದೆಗಳನ್ನು ಯಾವ ದಿನಾಂಕ ಮತ್ತು ವರ್ಷದಂದು ಮರಳಿಸಲಾಗಿದೆ ಎಂಬುದನ್ನು ಕಂಡುಹಿಡಿಯಬೇಕು’ ಎಂದು ಅವರು ಒತ್ತಾಯಿಸಿದರು.

‘ಅಕ್ರಮ ನೇಮಕಾತಿಗಳು ರಾಜ್ಯದ ಗಡಿ ಜಿಲ್ಲೆಗಳಲ್ಲಿಯೇ ವ್ಯಾಪಕವಾಗಿ ನಡೆದಿದೆ ಎಂಬ ಮಾಹಿತಿ ಇದ್ದು, ಅದರ ಬಗ್ಗೆ ವಿಶೇಷವಾಗಿ ಸರಕಾರ ಗಮನ ಹರಿಸಬೇಕು. ಹಾಗೆಯೇ ನೇಮಕಾತಿ ಸಂದರ್ಭದಲ್ಲಿ ಸಲ್ಲಿಸಲಾದ ಮೂಲ ಅಂಕಪಟ್ಟಿ, ಪೊಲೀಸ್ ವೆರಿಫಿಕೇಷನ್ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ಪ್ರಮಾಣ ಪತ್ರಗಳನ್ನು ಪರಿಶೀಲಿಸಬೇಕು’ ಎಂದು ಅವರು ತಿಳಿಸಿದರು. 

‘ಅಕ್ರಮ ನೇಮಕಾತಿ ದಿನದಿಂದ ಇಂದಿನವರೆಗೆ ಪಡೆದಿರುವ ವೇತನ ಮುಂಬಡ್ತಿ ಸೇರಿದಂತೆ ಎಲ್ಲ ಬಗೆಯ ಸವಲತ್ತುಗಳ ಮೊತ್ತವನ್ನು ತಕ್ಷಣವೇ ವಸೂಲಾತಿ ಮಾಡಬೇಕು. ಒಂದುವೇಳೆ ಸದರಿ ಮೊತ್ತ ಲಭ್ಯವಿಲ್ಲದಿದ್ದರೆ, ಅವರ ಸ್ಥಿರ ಮತ್ತು ಚರಾಸ್ಥಿಗಳನ್ನು ಸರಕಾರ ತಕ್ಷಣವೇ ಮುಟ್ಟುಗೋಲುನ ಹಾಕಿಕೊಂಡು ಪರಭಾರೆಯಾಗದಂತೆ ಕ್ರಮಜರುಗಿಸಿ ಈ ಜಾಲವನ್ನು ಪತ್ತೆ ಹಚ್ಚಬೇಕಾಗಿದೆ’ ಎಂದು ಅವರು ಮನವಿ ಮಾಡಿದರು.

‘ಅಕ್ರಮ ನೇಮಕಾತಿಗಳಿಂದಾಗಿ ಸರಕಾರಿ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹಾಳಾಗುತ್ತಿದೆ. ಇದರಿಂದ ಬೇಸತ್ತ ಜನ ಈಗಾಗಲೇ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸದೇ ಸರಕಾರಿ ಶಾಲೆಗಳಲ್ಲಿನ ಹಾಜರಾತಿ ಕಡಿಮೆಯಾಗಿ ಹಲವು ಶಾಲೆಗಳು ಮುಚ್ಚಿಹೋಗುತ್ತಿವೆ. ಹೀಗಾಗಿ ರಾಜ್ಯದ ಭವಿಷ್ಯವನ್ನು ರೂಪಿಸುವ ಶಿಕ್ಷಣವೇ ಹಾಳಾದ ಮೇಲೆ ರಾಜ್ಯ ವಿನಾಶದೆಡೆಗೆ ಸಾಗಿದಂತಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

-----------------------------------
‘ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಶಿಕ್ಷಣ ಇಲಾಖೆಯಲ್ಲಿನ ಹಲವು ಅಧಿಕಾರಿಗಳು, ನೌಕರರು ಮತ್ತು ಶಿಕ್ಷಕರು ಈಗಾಗಲೇ ನಾಪತ್ತೆಯಾಗಿರುವ ವರದಿಗಳು ಬರುತ್ತಿವೆ. 2001ರಿಂದ ಇಂದಿನವರೆಗೂ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿರ್ದೇಶಕರ, ಆಯುಕ್ತರ ಹಾಗೂ ಪ್ರಧಾನ ಕಾರ್ಯದರ್ಶಿಗಳ ಮೇಲೆ ಪ್ರಾಮಾಣಿಕ ವಿಚಾರಣೆಗೆ ಒಳಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಿಬಿಐ ತನಿಖೆಯನ್ನು ನಡೆಸಬೇಕು'

-ಮಲ್ಲಿಕಾರ್ಜುನಯ್ಯ ಬಿ.ಎಸ್., ಲಂಚಮುಕ್ತ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News