ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡದೆ ರಾಜ್ಯ ಸರಕಾರದಿಂದ ವಂಚನೆ: ಪ್ರಣವಾನಂದ ಸ್ವಾಮೀಜಿ

Update: 2022-09-30 17:13 GMT

ಸಾಗರ, ಸೆ.30: ನಾರಾಯಣ ಗುರುಗಳ ಹೆಸರಿನಲ್ಲಿ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸದೆ ಇರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ನಾರಾಯಣ ಗುರುಗಳ ಪವಿತ್ರ ಸ್ಥಳವಾದ ಮಂಗಳೂರಿನ ಕುದ್ರೋಳಿಯಿಂದ ಬೆಂಗಳೂರಿನವರೆಗೆ 40 ದಿನಗಳ 650 ಕಿ.ಮೀ. ಪಾದಯಾತ್ರೆಯನ್ನು ಜನವರಿ ಮೊದಲ ವಾರದಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿಪೀಠದ ಪೀಠಾಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಕುದ್ರೋಳಿಯಿಂದ ಹೊರಟು, ಶಿವಮೊಗ್ಗ ಜಿಲ್ಲೆಯನ್ನು ಬಳಸಿ ಬೆಂಗಳೂರಿ ನಲ್ಲಿ ಫ್ರೆಬ್ರವರಿಯಲ್ಲಿ ಹಕ್ಕೊತ್ತಾಯದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರ ಈಡಿಗ, ಬಿಲ್ಲವ, ನಾಮಧಾರಿ ಸಮಾಜಕ್ಕೆ ವಂಚನೆ ಮಾಡುತ್ತಿದೆ. ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಅವರು ಒಪ್ಪಿದ್ದರು. ಆದರೆ, ಅವರ ಅವಧಿಯಲ್ಲಿ ನಿಗಮ ಸ್ಥಾಪನೆ ಮಾಡಿಲ್ಲ. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮೂರು ಬಾರಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಅವರು ಕೂಡ ಜನಾಂಗದ ಶ್ರೇಯೋಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ. ರಾಜ್ಯದಲ್ಲಿ 70 ಲಕ್ಷಕ್ಕೂ ಅಧಿಕ ಜನಾಂಗ ಬಾಂಧವರಿದ್ದಾರೆ. ಇವರಲ್ಲಿ ಶೇ. 15ರಷ್ಟು ಮಾತ್ರ ಆರ್ಥಿಕವಾಗಿ ಸದೃಢರಾಗಿದ್ದು, ಉಳಿದ ಶೇ.85ರಷ್ಟು ತೀರಾ ಬಡತನದಲ್ಲಿದ್ದಾರೆ. ನಮ್ಮನ್ನು ರಾಜಕೀಯಕ್ಕೆ ಉಪಯೋಗಿಸಿಕೊಂಡು ಎಸೆಯುವ ಪ್ರವೃತ್ತಿಯನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಸಣ್ಣಸಣ್ಣ ಜನಾಂಗಗಳಿಗೆ ನಿಗಮ ಸ್ಥಾಪನೆ ಮಾಡಿ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿ 500 ಕೋಟಿ ರೂ. ಮೀಸಲಿಡಬೇಕು. ಮಂಗಳೂರು, ಕುಂದಾಪುರದಲ್ಲಿರುವಂತೆ ಇತರ ಜಿಲ್ಲೆಗಳಲ್ಲೂ ಸೇಂದಿ ಇಳಿಸಲು ಸರಕಾರ ಉತ್ತೇಜನ ನೀಡಬೇಕು. ಇಲ್ಲವಾದಲ್ಲಿ ಜನಾಂಗದವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಇರಿಸಲಾಗಿತ್ತು. ಸರಕಾರ ನಮ್ಮ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿಯುವಂತೆ ಮಾಡುವ ವ್ಯವಸ್ಥಿತ ಪಿತೂರಿ ಮಾಡುತ್ತಿರುವುದು ಖಂಡನೀಯ. ಜನಾಂಗದಿಂದ ಏಳು ಶಾಸಕರು ಗೆದ್ದಿದ್ದಾರೆ. ಈ ಪೈಕಿ ಇಬ್ಬರನ್ನು ಮಂತ್ರಿ ಮಾಡಿದ್ದಾರೆ. ಸಾಗರ ಕ್ಷೇತ್ರದ ಶಾಸಕ ಹಾಲಪ್ಪ ಅವರಿಗೆ ಮಂತ್ರಿ ಸ್ಥಾನ ನೀಡದೆ ವಂಚಿಸಲಾಗಿದೆ. ಸರಕಾರ ಜನಾಂಗಕ್ಕೆ ಅನ್ಯಾಯ ಮಾಡುತ್ತಿರುವುದನ್ನು ವಿರೋಧಿಸಿ ಈಡಿಗ, ಬಿಲ್ಲವ, ನಾಮಧಾರಿ ಸಮಾಜದ ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬನ್ನಿ. ನಿಮ್ಮ ಗೆಲುವಿಗೆ ಸಮಾಜ ಟೊಂಕ ಕಟ್ಟಿ ನಿಲ್ಲುತ್ತದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮುದಾಯ ಬಂಧುಗಳು 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಸಮಾಜದ ಬಂಧುಗಳನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ದಾಖಲಿಸುವ ಕೆಲಸ ಮಾಡಲಾಗುತ್ತದೆ. ಸರಕಾರ ಸಮುದಾಯವನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ಸಮಾಜದ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಕ್ತಿಪೀಠದ ರಾಷ್ಟ್ರೀಯ ಕಾರ್ಯ ದರ್ಶಿ ಬಿ.ಎಚ್.ಮಂಚೇಗೌಡ, ಪ್ರಮುಖರಾದ ನಾಗರಾಜ ನಾಯ್ಕಿ, ಜಯರಾಮ ಸೂರನಗದ್ದೆ, ಸುಧಾಕರ ಕುಗ್ವೆ, ನಾಗರಾಜ ಕೈಸೋಡಿ, ಪರಶುರಾಮ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News