ವಿಚಾರಣಾಧೀನ ಕೈದಿಗಳ ವೈದ್ಯಕೀಯ ನಿರ್ಲಕ್ಷ್ಯವೆಂಬ ಅಕ್ಷಮ್ಯ ಅಪರಾಧ

Update: 2022-10-01 05:54 GMT
photo : PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿ ಕಳೆದ ಐದು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಭಾರತದ ಪ್ರಖ್ಯಾತ ಮಾನವ ಹಕ್ಕುಗಳ ಹೋರಾಟಗಾರ, ಚಿಂತಕ ಗೌತಮ್ ನವ್ಲಾಖಾ ಅವರಿಗೆ ಕೂಡಲೇ ವೈದ್ಯಕೀಯ ಚಿಕಿತ್ಸೆ ಒದಗಿಸಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಯಾವುದೇ ಪೂರ್ವ ಅಪರಾಧಿಕ ಕೃತ್ಯಗಳ ಹಿನ್ನೆಲೆಯೇ ಇಲ್ಲದೆ, ಸಾಮಾಜಿಕವಾಗಿ ಬೇರುಗಳನ್ನು ಹೊಂದಿರುವ, ಕೇವಲ ರಾಜಕೀಯ ಪೂರ್ವಾಗ್ರಹಗಳಿಂದ ಬಂಧನಕ್ಕೊಳಗಾದ ರಾಜಕೀಯ ಕಾರ್ಯಕರ್ತರು ಕನಿಷ್ಠ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಈ ದೇಶದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಬೇಕಿರುವುದು ಆಡಳಿತಾರೂಢ ಪಕ್ಷದ ದುಷ್ಟ ಹಾಗೂ ಅಮಾನವೀಯ ರಾಜಕೀಯಕ್ಕೆ ಮತ್ತೊಂದು ಉದಾಹರಣೆಯನ್ನು ಒದಗಿಸುತ್ತಿದೆ. 2018ರಲ್ಲಿ ಭೀಮಾ ಕೋರೆಗಾಂವ್ ಸಂಚು ಆರೋಪದ ಮೇಲೆ ಬಂಧಿತರಾಗಿರುವ ಗೌತಮ್ ನವ್ಲಾಖಾ ಹಾಗೂ ಇತರ 16 ಆರೋಪಿಗಳೆಲ್ಲರೂ ಈ ದೇಶದ ಹೆಮ್ಮೆಯ ಕಾರ್ಯಕರ್ತರು, ವಕೀಲರು, ಬುದ್ಧಿಜೀವಿಗಳು ಆಗಿದ್ದಾರೆ. ಗೌತಮ್ ನವ್ಲಾಖಾ ಅವರಿಗೆ ಈಗ 73 ವರ್ಷ ವಯಸ್ಸಾಗಿದ್ದು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಆದರೆ ಜೈಲಿನ ಆಡಳಿತ ಅವರಿಗೆ ಸೂಕ್ತವಾದ ಯಾವುದೇ ವೈದ್ಯಕೀಯ ಆರೈಕೆಗಳನ್ನು ಕೊಡುತ್ತಿಲ್ಲ ಎಂದು ಅವರ ವಕೀಲರು ಹಾಗೂ ಕುಟುಂಬಸ್ಥರು ಆರೋಪಿಸುತ್ತಲೇ ಬಂದಿದ್ದಾರೆ. ಕೆಳಹಂತದ ಕೋರ್ಟ್‌ಗಳಲ್ಲಿ ಜಾಮೀನು ಮತ್ತು ಸೂಕ್ತ ವೈದ್ಯಕೀಯ ಆರೈಕೆಯ ಬಗ್ಗೆ ಅಹವಾಲು ಸಲ್ಲಿಸಿದಾಗಲೆಲ್ಲಾ ಸರಕಾರಿ ವಕೀಲರು ಅವರ ಆರೋಗ್ಯಸ್ಥಿತಿ ಉತ್ತಮವಾಗಿಯೇ ಇದೆಯೆಂದೂ, ಕಾರಾಗೃಹದ ವೈದ್ಯರೇ ಅವರ ಚಿಕಿತ್ಸೆ ಮಾಡಬಲ್ಲರೆಂದೂ, ತಮಗಿರುವ ತೊಂದರೆಗಳನ್ನು ಆರೋಪಿಯು ಉತ್ಪ್ರೇಕ್ಷಿಸಿ ಕೋರ್ಟ್‌ನ ಅನುಕಂಪ ಪಡೆಯಲು ಪ್ರಯತ್ನಿಸುತ್ತಿದ್ದರೆಂದೂ ವೈದ್ಯಕೀಯ ಚಿಕಿತ್ಸೆಯ ಹಕ್ಕನ್ನು ವಿರೋಧಿಸುತ್ತಾ ಬಂದಿದ್ದರು. ಅದರ ಜೊತೆಗೆ UAPA ಕಾಯ್ದೆಯಡಿ ಇರುವ ಆರೋಪದ ಭೂತವನ್ನು ತೋರಿಸಿ ಆರೋಪಿಗಳಿಗಿರುವ ಮೂಲಭೂತ ಹಕ್ಕುಗಳನ್ನು ನಿರಾಕರಿಸುವಂತೆ ಕೆಳಗಿನ ಕೋರ್ಟುಗಳನ್ನು ಪ್ರಭಾವಿಸುತ್ತಾ ಬಂದಿದ್ದರು.

ಇದರ ಪರಿಣಾಮವಾಗಿ ಗೌತಮ್ ನವ್ಲಾಖಾ ಅವರ ಆರೋಗ್ಯ ಇನ್ನಷ್ಟು ಬಿಗಡಾಯಿಸುತ್ತಾ ಬಂದಿರುವುದಲ್ಲದೆ ಕರುಳಿನ ಕ್ಯಾನ್ಸರ್‌ಗೆ ಕೂಡಾ ಕಾರಣವಾಗಿರಬಹುದೆಂದು ಕೊನೆಯ ಆಸರೆಯಾದ ಸುಪ್ರೀಂ ಕೋರ್ಟ್‌ನ ಮುಂದೆ ಅಹವಾಲು ಸಲ್ಲಿಸಿದ್ದರು. ಮೊನ್ನೆ ಸುಪ್ರೀಂ ಕೋರ್ಟ್ ಅವರ ಅಹವಾಲನ್ನು ಪುರಸ್ಕರಿಸಿ ಕೂಡಲೇ ಅವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಅವರ ಆಯ್ಕೆಯ ಆಸ್ಪತ್ರೆಗೆ ತೋರಿಸಲು ಆದೇಶ ನೀಡಿದೆೆ. ಆದರೆ ಅವರ ಸೂಕ್ಷ್ಮಆರೋಗ್ಯ ಪರಿಸ್ಥಿತಿಯಿಂದಾಗಿ ಅವರನ್ನು ಕಿಕ್ಕಿರಿದು ತುಂಬಿರುವ ತಲೋಜಾ ಜೈಲಿನಿಂದ ಗೃಹ ಬಂಧನಕ್ಕೆ ಸ್ಥಳಾಂತರಿಸಬೇಕೆಂಬ ಅಹವಾಲಿನ ವಿಚಾರಣೆಯನ್ನು ಮುಂದೂಡಿದೆ. ಸರಕಾರವು ಈ ರೀತಿ ತನ್ನ ರಾಜಕೀಯ ಪೂರ್ವಾಗ್ರಹಗಳಿಂದ ರಾಜಕೀಯವಾಗಿ ತಮಗೆ ವಿರುದ್ಧವಾಗಿರುವ ಧೋರಣೆಗಳನ್ನು ಹೊಂದಿರುವ ಕೈದಿಗಳಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಯನ್ನು ಕೊಡದೆ ಅವರ ಆರೋಗ್ಯ ಬಿಗಡಾಯಿಸಲು ಕಾರಣವಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಬಂಧನದಲ್ಲಿದ್ದ ರಾಜಕೀಯ ಕೈದಿಗಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ನಿರಾಕರಿಸಿ ಅವರ ಸಾವುಗಳಿಗೂ ಕಾರಣವಾಗಿದೆ. ಇದೇ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲಾಗಿದ್ದ 83 ವಯಸ್ಸಿನ ವೃದ್ಧ ಪಾದ್ರಿ ಸ್ಟಾನ್‌ಸ್ವಾಮಿ ನೀರು ಕುಡಿಯಲು ಲೋಟಕ್ಕೆ ಸ್ಟ್ರಾ ಕೊಡುವುದನ್ನು ಕೂಡ UAPA ಭೂತ ತೋರಿಸಿ ಎನ್‌ಐಎ ವಿರೋಧಿಸಿತ್ತು.

ಕೊನೆಗೆ ಅವರಿಗೆ ಸ್ಟ್ರಾ ಕೊಡಬೇಕೆಂದು ಅನುಮತಿ ನೀಡುವುದಕ್ಕೆ ಹೈಕೋರ್ಟಿನ ಮೆಟ್ಟಿಲನ್ನು ಹತ್ತಬೇಕಾಯಿತು. ಬಿಗಡಾಯಿಸುತ್ತಿದ್ದ ಅವರ ಅನಾರೋಗ್ಯ ಪರಿಸ್ಥಿತಿಯನ್ನು ಹೈಕೋರ್ಟ್‌ನ ಗಮನಕ್ಕೆ ತಂದು ಜೈಲಿನಾಚೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಲು ಅನುಮತಿ ಕೋರಿದಾಗಲೆಲ್ಲಾ ಎನ್‌ಐಎ ಅದನ್ನು ಉತ್ಪ್ರೇಕ್ಷೆಯೆಂದೂ, ಅವರಿಗೆ ಜೈಲಿನಿಂದಾಚೆ ಚಿಕಿತ್ಸೆ ನೀಡಿದರೆ ''ದೇಶದ ಭದ್ರತೆಗೆ ಆಪತ್ತಿದೆ''ಯೆಂದೂ ವಾದಿಸುತ್ತಾ ಬಂತು. ಕೋರ್ಟ್‌ಗಳು ಕೂಡ ಬಹುಕಾಲ ಎನ್‌ಐಎಯ ಪೂರ್ವಾಗ್ರಹಗಳಾಚೆ ನಿಂತು ನ್ಯಾಯ ಹಾಗೂ ಆರೋಪಿಗಳ ಮೂಲಭೂತ ಹಕ್ಕುಗಳ ಪರಿಧಿಯಲ್ಲಿ ತನ್ನ ಕರ್ತವ್ಯವನ್ನು ಮಾಡಲೇ ಇಲ್ಲ. ಅಂತಿಮವಾಗಿ ಅವರಿಗೆ ಜೈಲಿನ ಹೊರಗಡೆ ಚಿಕಿತ್ಸೆ ಕೊಡಲು ಅವಕಾಶ ನೀಡಿದರೂ ತುಂಬಾ ತಡವಾಗಿತ್ತು. ದೇಶದ ಭದ್ರತೆಯ ಗುಮ್ಮ ತೋರಿಸಿ ಸರಕಾರ ತನ್ನ ರಾಜಕೀಯ ವಿರೋಧಿಗೆ ಕನಿಷ್ಠ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ ಅಮಾನವೀಯ, ಅಸಾಂವಿಧಾನಿಕ, ಅನಾಗರಿಕ ನಡೆಯಿಂದಾಗಿ 2021ರ ಜುಲೈ 5ರಂದು ಸ್ಟಾನ್ ಸ್ವಾಮಿ ನಿಧನರಾದರು. ಮೇಲ್ನೋಟಕ್ಕೆ ಅದು ಸಕಾಲಕ್ಕೆ ಸಿಗದ ವೈದ್ಯಕೀಯ ಆರೈಕೆಯ ಪರಿಣಾಮ ಎಂಬಂತೆ ತೋರಿದರೂ ಅದಕ್ಕೆ ಕಾರಣವಾದದ್ದು ಜೈಲು ಆಡಳಿತ, ಸರಕಾರ ತಮ್ಮ ರಾಜಕೀಯ ಪೂರ್ವಾಗ್ರಹಗಳಿಂದ ತೋರಿದ ಸಾಂಸ್ಥಿಕ ವೈದ್ಯಕೀಯ ನಿರ್ಲಕ್ಷದಿಂದಾಗಿಯೇ ಸ್ಟಾನ್ ಸ್ವಾಮಿ ಬಲಿಯಾದರು. ಆಡಳಿತಾರೂಢ ಸರಕಾರವಾಗಲೀ, ನ್ಯಾಯಾಂಗವಾಗಲೀ ಸ್ಟಾನ್ ಸ್ವಾಮಿಯವರ ಈ ಸಾಂಸ್ಥಿಕ ಕೊಲೆಯಿಂದ ಯಾವುದೇ ಪಾಠವನ್ನು ಕಲಿತಂತಿಲ್ಲ.

ಇದೇ ಆಗಸ್ಟ್ 25ರಂದು ನಾಗಪುರದ ಕುಖ್ಯಾತ ಅಂಡಾ ಜೈಲಿನಲ್ಲಿ ಇದೇ ಕರಾಳ UAPA ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಿದ್ದ ಪಾಂಡು ನರೋತೆ ಎಂಬ ಕೈದಿಯೂ ಜೈಲು ಆಡಳಿತದ ಪೂರ್ವಾಗ್ರಹ ಪೀಡಿತ ನಿರ್ಲಕ್ಷ ಹಾಗೂ ನ್ಯಾಯಾಂಗದ ಸಂವೇದನಾ ರಹಿತ ಧೋರಣೆಗೆ ಗುರಿಯಾಗಿ ನಿಧನರಾಗಿದ್ದಾರೆ. ಪಾಂಡು ನರೋತೆಯ ವಕೀಲರು ಮತ್ತು ಕುಟುಂಬದವರ ಪ್ರಕಾರ ಪಾಂಡು ಅವರಿಗೆ ಸುದೀರ್ಘ ಕಾಲ ವೈರಲ್ ಜ್ವರ ಹಾಗೂ ಇನ್ನಿತರ ತೊಂದರೆಗಳಿದ್ದರೂ, ಅದಕ್ಕೆ ಚಿಕಿತ್ಸೆ ಕೊಡುವ ವ್ಯವಸ್ಥೆ ಜೈಲಿನ ಆಸ್ಪತ್ರೆಯಲ್ಲಿ ಇಲ್ಲವೆಂದು ಗೊತ್ತಿದ್ದರೂ ಅವರಿಗೆ ಹೊರಗೆ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸುವ ಯಾವ ಕ್ರಮವನ್ನೂ ಜೈಲು ಆಡಳಿತ ತೆಗೆದುಕೊಳ್ಳಲಿಲ್ಲ. ಅದು ಉತ್ಪ್ರೇಕ್ಷೆಯೆಂದೇ ತಳ್ಳಿಹಾಕುತ್ತಾ ಬಂದಿತು. ಅವರ ಆರೋಗ್ಯ ಬಿಗಡಾಯಿಸಿ ಸರಕಾರಿ ಆಸ್ಪತ್ರೆಗೆ ಕರೆತಂದಾಗಲೂ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಿಕೊಳ್ಳಲಿಲ್ಲ. ಹೀಗಾಗಿ ಈ ಸಾಂಸ್ಥಿಕ ವೈದ್ಯಕೀಯ ನಿರ್ಲಕ್ಷ ಹಾಗೂ ಪೂರ್ವಾಗ್ರಹಗಳಿಂದಾಗಿಯೇ ಪಾಂಡು ನರೋತೆ ಪ್ರಾಣಬಿಟ್ಟರೆಂದು ಅವರ ಕುಟುಂಬ ಆರೋಪಿಸುತ್ತಿದೆ ಮತ್ತು ಒಂದು ನ್ಯಾಯಾಂಗ ತನಿಖೆಯನ್ನು ಆಗ್ರಹಿಸುತ್ತಿದೆ. ಅದೇ ರೀತಿ ಹಾಥರಸ್‌ನಲ್ಲಿ ನಡೆದ ದೌರ್ಜನ್ಯದ ಅಧ್ಯಯನ ವರದಿ ಮಾಡಲು ಬರುತ್ತಿದ್ದ ಅತೀಕುರ್ರಹಮಾನ್ ಎಂಬ 27 ವರ್ಷದ ಯುವಕನನ್ನು ಪತ್ರಕರ್ತ ಸಿದ್ದೀಕ್ ಕಪ್ಪನ್ ಜೊತೆಗೆ 2020ರ ಅಕ್ಟೋಬರ್‌ನಲ್ಲಿ ಬಂಧಿಸಲಾಯಿತು. ಬಂಧನಕ್ಕೊಳಗಾದಾಗ ಅವರಿಗೆ ಹೃದಯ ಚಿಕಿತ್ಸೆಯಾಗಿ ಒಂದು ತಿಂಗಳಷ್ಟೇ ಆಗಿತ್ತೆಂದು ಅವರ ಕುಟುಂಬದವರು ಮತ್ತು ವಕೀಲರು ಜೈಲು ಆಡಳಿತಕ್ಕೆ ಹಾಗೂ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೂ ಜೈಲಿನ ಅನಾರೋಗ್ಯಕರ ವ್ಯವಸ್ಥೆ ಮತ್ತು ರಾಜಕೀಯ ಪೂರ್ವಾಗ್ರಹಗಳನ್ನಾಧರಿಸಿದ ವೈದ್ಯಕೀಯ ನಿರ್ಲಕ್ಷದಿಂದಾಗಿ ಅವರ ಪರಿಸ್ಥಿತಿ ಕಳೆದೆರಡು ವರ್ಷಗಳಲ್ಲಿ ಬಿಗಡಾಯಿಸುತ್ತಲೇ ಹೋಯಿತು. ಇಂದು ಅವರನ್ನು ಏಮ್ಸ್ ಗೆ ಸೇರಿಸಲಾಗಿದ್ದರೂ ಅವರ ಪರಿಸ್ಥಿತಿ ಸಾವು-ಬದುಕಿನ ನಡುವೆ ತೂಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಆಡಳಿತಾರೂಢ ಪಕ್ಷದ ರಾಜಕೀಯ ವಿರೋಧಿಗಳನ್ನು ಸುಳ್ಳು ಕೇಸುಗಳಲ್ಲಿ ಬಂಧಿಸಿ ಜೈಲಿಗೆ ದೂಡುವ ಪ್ರಕರಣಗಳು ಹತ್ತಾರು ಪಟ್ಟು ಹೆಚ್ಚಾಗಿದೆ. ಹಾಗೆಯೇ ಜೈಲಿನಲ್ಲಿ ಅವರ ಆರೋಗ್ಯ ಪರಿಸ್ಥಿತಿಯನ್ನು ಸಾಂಸ್ಥಿಕವಾಗಿ ಮತ್ತು ದುರುದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆಡಳಿತಾರೂಢ ಸರಕಾರ ವೈದ್ಯಕೀಯ ನಿರ್ಲಕ್ಷವನ್ನು ಕೂಡ ತನ್ನ ರಾಜಕೀಯ ವಿರೋಧಿಗಳನ್ನು ದಮನ ಮಾಡುವ ಅಸ್ತ್ರ ಮಾಡಿಕೊಂಡಿದೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಒಂದು ಕಡೆ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಂತ ಹೀನಾಯ, ಬರ್ಬರ ಅಪರಾಧ ಮಾಡಿ ಶಿಕ್ಷೆ ಅನುಭವಿಸುತ್ತಿರುವ ತನ್ನ ರಾಜಕೀಯ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡುವುದು, ಆಡಳಿತಾರೂಢ ಪಕ್ಷದ, ಅಪರಾಧ ಸಾಬೀತಾದ ಉಗ್ರ ಕಾರ್ಯಕರ್ತ ಬಾಬಾ ಬಜರಂಗಿ ಇನ್ನಿತರ ಘೋರ ಅಪರಾಧಿಗಳಿಗೆ ವೈದ್ಯಕೀಯ ಆಧಾರದಲ್ಲಿ ನ್ಯಾಯಾಲಯವೇ ಶಾಶ್ವತ ಜಾಮೀನನ್ನು ಕೊಡುವುದು, ಮತ್ತೊಂದೆಡೆ ಅಪರಾಧವೂ ಸಾಬೀತಾಗದ ಇನ್ನೂ ಕೇವಲ ವಿಚಾರಣಾಧೀನ ಆರೋಪಿಗಳನ್ನು ಕೇವಲ ರಾಜಕೀಯ ಪೂರ್ವಾಗ್ರಹದಿಂದಾಗಿ ವೈದ್ಯಕೀಯ ನಿರ್ಲಕ್ಷ ತೋರುತ್ತಾ ಸಾಯುವಂತೆ ಮಾಡುವುದು ಅಕ್ಷಮ್ಯ ಅಪರಾಧ. ಈ ದೇಶ ಒಂದು ನಾಗರಿಕ ಪ್ರಜಾತಂತ್ರವಾಗಿ ಉಳಿಯಬೇಕೆಂದರೆ ಇದು ಕೂಡಲೇ ನಿಲ್ಲಬೇಕು. ಕೈದಿಗಳಿಗೆ ಇರುವ ಆರೋಗ್ಯದ ಹಕ್ಕು, ಇತರ ನಾಗರಿಕ ಹಕ್ಕುಗಳನ್ನು ನ್ಯಾಯಾಂಗವಾದರೂ ಸರಕಾರ ಮುಂದಿಡುವ ಹುಸಿ ದೇಶಭದ್ರತೆಯ ಗುಮ್ಮಕ್ಕೆ ಬೆದರದೆ ರಕ್ಷಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News