ಅನಿಲ ತುಟ್ಟಿ: ಸಿಎನ್‍ಜಿ, ಪಿಎನ್‍ಜಿ ದರ ಹೆಚ್ಚಳ ನಿರೀಕ್ಷೆ

Update: 2022-10-01 03:45 GMT

ಹೊಸದಿಲ್ಲಿ: ಗ್ರಾಹಕ ದರ ಏರಿಕೆಯನ್ನು ಮಂದಗೊಳಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿ ಬೆಲೆಗಳ ಪರಾಮರ್ಶೆ ನಡೆಸುತ್ತಿರುವ ನಡುವೆಯೇ, ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಶುಕ್ರವಾರ ಶೇಕಡ 40ರಷ್ಟು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸಿಎನ್‍ಜಿ ಮತ್ತು ಪಿಎನ್‍ಜಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರ ಜತೆಗೆ ರಸಗೊಬ್ಬರ ಉತ್ಪಾದಕರ ಉತ್ಪಾದನಾ ಸಾಧನದ ಬೆಲೆ ಕೂಡಾ ಹೆಚ್ಚುವ ನಿರೀಕ್ಷೆ ಇದೆ ಎಂದು timesofindia.com ವರದಿ ಮಾಡಿದೆ.

ಓಎನ್‍ಜಿಸಿ ಮತ್ತು ಆಯಿಲ್ ಇಂಡಿಯಾಗೆ ನೀಡಲಾಗಿರುವ ತೈಲಕ್ಷೇತ್ರಗಳಲ್ಲಿ ಉತ್ಪಾದಿಸುತ್ತಿರುವ ಅನಿಲದ ಬೆಲೆ ಶನಿವಾರದಿಂದ ಪ್ರತಿ ಯೂನಿಟ್‍ಗೆ 8.57 ಡಾಲರ್ ಆಗಲಿದೆ. ಈ ಮುನ್ನ ಇದು 6.1 ಡಾಲರ್ ಆಗಿದ್ದು, 2023ರ ಏಪ್ರಿಲ್‍ನಲ್ಲಿ ಮುಂದಿನ ಪರಿಷ್ಕರಣೆ ನಿಗದಿಯಾಗಿದೆ. ಅಂತೆಯೇ ಆಂಧ್ರ ಸಮುದ್ರ ತೀರದ ತೈಲ ಕ್ಷೇತ್ರಗಳಲ್ಲಿ ತೈಲೋತ್ಪಾದನೆ ಮಾಡುತ್ತಿರುವ ರಿಲಯನ್ಸ್-ಬಿಪಿಯ ಅನಿಲಗಳ ಬೆಲೆ ಗರಿಷ್ಠಮಟ್ಟವನ್ನು 9.92 ಡಾಲರ್‌ ನಿಂದ  12.46 ಡಾಲರ್‌ ಗೆ ಹೆಚ್ಚಿಸಲಾಗಿದೆ.

ಉಕ್ಕು, ವಿದ್ಯುತ್ ಮತ್ತು ಸಿಮೆಂಟ್ ಉದ್ಯಮದ ಪ್ರಗತಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಎಂಟು ಪ್ರಮುಖ ಉದ್ಯಮ ವಲಯಗಳ ಪ್ರಗತಿದರ ಆಗಸ್ಟ್‌ ನಲ್ಲಿ ಒಂಬತ್ತು ತಿಂಗಳ ಕನಿಷ್ಠ ಅಂದರೆ ಶೇಕಡ 3.3ಕ್ಕೆ ಕುಸಿದಿದೆ. ಪ್ರಮುಖ ವಲಯಗಳ ಸೂಚ್ಯಂಕ 2021ರ ಆಗಸ್ಟ್‌ ನಲ್ಲಿ ಶೇಕಡ 12.2ರಷ್ಟು ಆಗಿತ್ತು.

ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಚ್ಚಾ ತೈಲ ವಲಯದಲ್ಲಿ (ಮೈನಸ್ 3.3%) ಹಾಗೂ ನೈಸರ್ಗಿಕ ಅನಿಲ ವಲಯದಲ್ಲಿ ಉತ್ಪಾದನೆ (ಮೈನಸ್ 0.9%) 2022ರ ಆಗಸ್ಟ್‌ ನಲ್ಲಿ ಕುಸಿದಿದೆ. ಕಳೆದ 13 ತಿಂಗಳ ಪೈಕಿ 12 ತಿಂಗಳುಗಳಲ್ಲಿ ಕಚ್ಚಾ ತೈಲ ಉತ್ಪಾದನೆ ಕುಸಿದಿರುವುದು ಇದಕ್ಕೆ ಮುಖ್ಯ ಕಾರಣ. ನೈಸರ್ಗಿಕ ಅನಿಲ ವಲಯ ಸತತ ಎರಡನೇ ತಿಂಗಳು ಕುಸಿತ ಕಂಡಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News