ದಾವಣಗೆರೆ ಮನಪಾ ಮೇಯರ್ ಸ್ಥಾನ ಎಸ್ಟಿಗೆ ನಿಗದಿಪಡಿಸಿದ ಹೈಕೋರ್ಟ್

Update: 2022-10-01 04:51 GMT

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲು ನೀಡಬೇಕಿತ್ತು. ಆದರೆ, ರಾಜ್ಯ ಸರಕಾರ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿ ಆದೇಶ ನೀಡಿತ್ತು. ಇದರ ವಿರುದ್ಧ ಹೈಕೋರ್ಟ್ ಮೇಟ್ಟಿಲೇರಿದ ಪರಿಣಾಮ ನ್ಯಾಯಾಲಯ ಎಸ್ಟಿ ಮೀಸಲಾತಿ ನಿಗದಿ ಮಾಡಿ ಆದೇಶ ನೀಡಿದ್ದು, ಇದು ಸರಕಾರಕ್ಕೆ ಹಾಗೂ ಬಿಜೆಪಿ ನಾಯಕರಿಗೆ ಮುಖಭಂಗವಾಗಿದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಮಂಜುನಾಥ್ ಗಡಿಗುಡಾಳ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿತ್ತು. ಆದರೆ ಅಧಿಕಾರಕ್ಕಾಗಿ ಬಿಜೆಪಿ ಪಕ್ಷ ಇಲ್ಲಿ ವಾಸವಿಲ್ಲದ ಬಿಜೆಪಿ ವಿಧಾನ ಪರಿಷತ್ ಸದಸ್ಯರ ಹೆಸರು ಸೇರಿಸಿ ಹಿಂಬಾಗಿಲ ಮೂಲಕ ಮೋಸದಿಂದ ಪಾಲಿಕೆ ಅಧಿಕಾರ ಹಿಡಿದಿತ್ತು. ಆದರೆ, ನ್ಯಾಯಾಲಯದ ಆದೇಶದಿಂದ ಬಿಜೆಪಿಯವರಿಗೆ ಮುಖಭಂಗವಾಗಿದೆ ಎಂದರು.

ರಾಜ್ಯ ಸರಕಾರ ನಿಯಮದ ಪ್ರಕಾರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್ಟಿ ಮೀಸಲಾತಿ ನೀಡಬೇಕಿತ್ತು. ಎರಡು ಬಾರಿ ಸಾಮಾನ್ಯ ಹಾಗೂ ಮೂರನೇ ಅವಧಿಗೆ ಎಸ್ಸಿ ಮಹಿಳಾ ಮೀಸಲಾತಿ ಆಗಿತ್ತು. ನಾಲ್ಕನೇ ಬಾರಿ ಎಸ್ಟಿಗೆ ಮೀಸಲಾತಿ ಘೋಷಣೆ ಮಾಡಬೇಕಿತ್ತು. ಆದರೆ, ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ನಿಗದಿಪಡಿಸಿ ಸರಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನಿ ಹಾಗೂ ಅವರ ಪತಿ ಗಣೇಶ್ ಹುಲ್ಲುಮನಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಾನೂನಿನ ಪ್ರಕಾರ ಎಸ್ಟಿಗೆ ಮೀಸಲಾತಿ ನಿಗದಿಪಡಿಸಿ ತೀರ್ಪು ನೀಡಿದೆ. ಬಳಿಕ ಎಚ್ಚೆತ್ತ ರಾಜ್ಯ ಸರಕಾರ ಈಗ ಅಧಿಸೂಚನೆ ಹೊರಡಿಸಿದ್ದು, ದಾವಣಗೆರೆ ಎಸ್ಟಿಗೆ ಮೇಯರ್ ಸ್ಥಾನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬಿಜೆಪಿಯ ಕುತಂತ್ರ ರಾಜಕಾರಣ ಬಟಾಬಯಲಾಗಿದೆ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಚಮನ್ ಸಾಬ್,ಪಾಮೇನಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್, ಕಲ್ಲಳ್ಳಿ ನಾಗರಾಜ್, ಜಗದೀಶ್,ರವಿ, ತಿಮ್ಮೇಶ್, ಗಣೇಶ್ ಹುಲ್ಮನಿ, ಸತೀಶ್, ವಿನಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News