ಭಾರತ ಐಕ್ಯತಾ ಯಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ: ಸಿದ್ದರಾಮಯ್ಯ

Update: 2022-10-01 14:08 GMT

ಚಾಮರಾಜನಗರ, ಅ. 1: ‘ಎಐಸಿಸಿ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತ ಐಕ್ಯತಾ ಯಾತ್ರೆ' ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶಕ್ಕಲ್ಲ. ಬದಲಿಗೆ ಜನರಲ್ಲಿ ಭಯ, ಆತಂಕದ ನಿರ್ಮಾಣವಾಗುತ್ತಿದ್ದು, ಈ ಜನರಿಗೆ ಆತ್ಮಸ್ಥೈರ್ಯ ತುಂಬಬೇಕೆಂಬ ಕಾರಣಕ್ಕೆ. ಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಯಾತ್ರೆಗೆ ಸಂಘ-ಸಂಸ್ಥೆಗಳು, ವಿಚಾರವಂತರು, ಚಿಂತಕರು, ಬರಹಗಾರರು.. ಹೀಗೆ ಎಲ್ಲ ವರ್ಗದ ಜನರು ಭಾಗವಹಿಸುತ್ತಿದ್ದಾರೆ. ಈ ಜನರ ಅಭಿಪ್ರಾಯ ಸಂಗ್ರಹಿಸಲು ರಾಹುಲ್ ಗಾಂಧಿ ಸಂವಹನ ಸಭೆಗಳನ್ನು ನಡೆಸುತ್ತಿದ್ದು, ನಿನ್ನೆ ಆದಿವಾಸಿಗಳ ಜೊತೆ, ಕೊರೊನ ಕಾಲದಲ್ಲಿ ಆಕ್ಸಿಜನ್ ಸಿಗದೆ ಸಾವಿಗೀಡಾದ 36 ಜನರ ಕುಟುಂಬಗಳ ಜೊತೆ ಮಾತುಕತೆ ನಡೆಸಿದ್ದಾರೆ' ಎಂದು ತಿಳಿಸಿದರು.

‘ಬಿಜೆಪಿ ಸರಕಾರದ ನೀತಿ-ನಿರ್ಧಾರಗಳನ್ನು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕುವುದು, ಅವರ ಮೇಲೆ ಈಡಿ, ಸಿಬಿಐ ಛೂ ಬಿಡುವುದು ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲರಿಂದ ಆತಂಕ ವ್ಯಕ್ತವಾಗುತ್ತಿದೆ' ಎಂದ ಅವರು, ‘ನಮ್ಮ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ಹತಾಶೆ ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ' ಎಂದು ಟೀಕಿಸಿದರು.

‘ಬಿಜೆಪಿಗೆ ಜನರನ್ನು ದಾರಿ ತಪ್ಪಿಸುವುದೇ ದೊಡ್ಡ ಕೆಲಸ. ಬಿಜೆಪಿ ಸುಳ್ಳು ಉತ್ಪಾದಕ ಕಾರ್ಖಾನೆ. ಪಾದಯಾತ್ರೆಗೆ ಅದ್ಭುತವಾದ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇಷ್ಟು ಬೃಹತ್ ಪ್ರಮಾಣದ ಸ್ಪಂದನೆಯನ್ನು ನಾವೂ ನಿರೀಕ್ಷೆ ಮಾಡಿರಲಿಲ್ಲ. ಇದರಿಂದ ವಿಚಲಿತರಾಗಿ ಜನರಿಗೆ ತಪ್ಪು ಮಾಹಿತಿ ಕೊಡುವುದು, ಸುಳ್ಳು ಜಾಹಿರಾತು ನೀಡುವುದನ್ನು ಬಿಜೆಪಿ ಅವರು ಮಾಡುತ್ತಿದ್ದಾರೆ. ಇಂತಹ ಹಲವು ಸುಳ್ಳುಗಳನ್ನು ಹಿಂದೆಯೂ ಹೇಳಿದ್ದಾರೆ. ಅದರ ಜೊತೆಗೆ ಇದೂ ಒಂದು ಸುಳ್ಳು' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ದೇಶದಲ್ಲಿ ಶೇ.80ರಷ್ಟು ಜನ ಮಾಂಸಹಾರಿಗಳು. ಮಾಂಸಹಾರ ಇವತ್ತು ನಿನ್ನೆಯದಲ್ಲ. ಆರೆಸೆಸ್ಸ್‍ನ ಮೋಹನ್ ಭಾಗವತ್ ಹುಟ್ಟುವ ಮೊದಲಿನಿಂದಲೂ ಅಂದರೆ ಪುರಾತನಾ ಕಾಲದಿಂದಲೂ ಜನ ಮಾಂಸಹಾರ ಸೇವನೆ ಮಾಡುತ್ತಿದ್ದಾರೆ' ಎಂದು ಟೀಕಿಸಿದ ಅವರು, ‘ಸರಕಾರ ಪೊಲೀಸನವರನ್ನು ಛೂ ಬಿಟ್ಟಿದೆ. ನಾನು, ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೇವಾಲಾ ಅವರು ‘ಪೇ ಸಿಎಂ ಪೋಸ್ಟರ್' ಅಂಟಿಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ' ಎಂದು ವಾಗ್ದಾಳಿ ನಡೆಸಿದರು.

-------------------------------------------------

‘ನಾವು ಜನರ ನಾಡಿ ಮಿಡಿತ ನೋಡಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಹೇಳುತ್ತಿದ್ದೇವೆ. ಅಧಿಕಾರಕ್ಕೆ ಬಂದ ಮೇಲೆ ಏನು ಮಾಡುತ್ತೇವೆ ಎಂದು ಈಗಲೇ ಹೇಳುವುದು ಸರಿಯಲ್ಲ. ಹಾಗೆ ಹೇಳಿದರೆ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲೆಸಿದಂತಾಗುತ್ತದೆ'

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News