ಸಂಕುಚಿತ ವ್ಯಾಪ್ತಿ ಹೊಂದಿರುವ ಕನ್ನಡ ಭಾಷಾ ವಿಧೇಯಕ: ವಿ.ಪಿ.ನಿರಂಜನಾರಾಧ್ಯ ಅಸಮಾಧಾನ

Update: 2022-10-01 13:23 GMT

ಬೆಂಗಳೂರು, ಅ. 1: ಕಳೆದ ವಾರ ವಿಧಾನಸಭೆಯಲ್ಲಿ ಮಂಡನೆಯಾದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022' ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದೆ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಪೂರ್ಣ ಅಭಿವೃದ್ಧಿ ವಿಧೇಯಕದಲ್ಲಿ ಕಾಣುತ್ತಿಲ್ಲ. ವಿಧೇಯಕ ಹೊರನಾಡು ಮತ್ತು ಹೊರ ದೇಶದಲ್ಲಿರುವ ಕನ್ನಡಿಗರ ಹಿತ ಕಾಪಾಡಲು ಚಿಂತಿಸಬೇಕಿತ್ತು. ವಿಧೇಯಕದ ಮೂಲ ಸ್ವರೂಪದಲ್ಲಿಯೇ ದೋಷವಿದ್ದಂತೆ ಕಾಣುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. 

‘ರಾಜ್ಯದಲ್ಲಿರುವ ಕೇಂದ್ರ ಹಾಗೂ ರಾಜ್ಯಗಳ ಕಚೇರಿಗಳಲ್ಲಿ ಕನ್ನಡ ಬಳಕೆ, ಕನ್ನಡೇತರರ ಕನ್ನಡ ಕಲಿಕೆ, ಸರಕಾರೇತರ ವಲಯದಲ್ಲಿ ಕನ್ನಡ ಭಾಷಾ ಬಳಕೆ, ಸಿನಿಮಾ, ಮನರಂಜನೆ, ಸಂಸ್ಕೃತಿ, ಪ್ರವಾಸೋದ್ಯಮ, ಇತ್ಯಾದಿ ನೆಲೆಯಿಂದ ಸಮಗ್ರವಾಗಿ ಜಾರಿಗೊಳಿಸುವ ಆಶಯ ವಿಧೇಯಕದಲ್ಲಿ ಇರಬೇಕಿತ್ತು' ಎಂದು ಹೇಳಿದ್ದಾರೆ.

‘ಸರಕಾರಿ, ಅರೆಸರಕಾರಿ, ಸರಕಾರಿ ಬೆಂಬಲಿತ ಸಂಸ್ಥೆಗಳು ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗನ ಉದ್ಯೋಗ ಅವಕಾಶಗಳ ಬಗ್ಗೆ ಮತ್ತು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಒಂದು ಸಮಗ್ರ ಅಧ್ಯಾಯವಿರಬೇಕಿತ್ತು. ಇದಾವುದು ವಿಧೇಯಕದಲ್ಲಿ ಕಾಣುತ್ತಿಲ್ಲ' ಎಂದು ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News