ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ದೂರು ಕೊಟ್ಟ ಶಾಲೆಗಳ ವಿರುದ್ಧವೇ ಕ್ರಮ: ರೂಪ್ಸಾ ಆರೋಪ

Update: 2022-10-01 15:13 GMT
 ಲೋಕೆಶ್ ತಾಳಿಕೋಟೆ - ರೂಪ್ಸಾ ಅಧ್ಯಕ್ಷರು

ಬೆಂಗಳೂರು, ಅ. 1: ‘ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟತೆಯ ವಿರುದ್ಧ ದೂರು ನೀಡಿದರೂ, ಆಪಾದಿತ ಅಧಿಕಾರಿಗಳ ಮೇಲೆ ತನಿಖೆ ಮಾಡುತ್ತಿಲ್ಲ. ಬದಲಾಗಿ ದೂರು ಕೊಟ್ಟ ಶಾಲೆಗಳ ಮೇಲೆಯೇ ದಾಳಿ ನಡೆಸಲಾಗಿದೆ’ ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜಮೆಂಟ್ ಸಂಘ(ರೂಪ್ಸಾ)ದ ಅಧ್ಯಕ್ಷ ಲೋಕೆಶ್ ತಾಳಿಕೋಟೆ ಆರೋಪಿಸಿದ್ದಾರೆ. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ಪ್ರದಾನ ಮಂತ್ರಿಗಳಿಗೆ ಪತ್ರವನ್ನು ಬರೆದ ನಂತರ ಸರಕಾರ ನೇಮಿಸಿದ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಾಕ್ಷಿ ಸಮೇತ ದೂರನ್ನು ನೀಡಲಾಗಿತ್ತು. ಆದರೂ ರಾಜ್ಯ ಸರಕಾರ ಕ್ರಮ ವಹಿಸುತ್ತಿಲ್ಲ. ಅನೇಕ ವರ್ಷಗಳಿಂದ ರಾಜ್ಯದಲ್ಲಿ ಶಿಕ್ಷಣವನ್ನು ನೀಡಿತ್ತಿರುವ ಖಾಸಗಿ ಶಾಲೆಗಳನ್ನು ಅನಧಿಕೃತ, ಕಾನೂನು ಬಾಹಿರ ಎಂಬ ಇತ್ಯಾದಿ ಹಣೆಪಟ್ಟಿ ನೀಡಿ ಸೇಡಿ ಕ್ರಮವನ್ನು ರಾಜ್ಯ ಸರಕಾರ ಅನುಸರಿಸುತ್ತಿದೆ’ ಎಂದು ತಿಳಿಸಿದರು.

‘ನಮ್ಮ ಸಂಘಟನೆಯು ರಾಜ್ಯದಲ್ಲಿ 13ಸಾವಿರಕ್ಕಿಂತಲೂ ಹೆಚ್ಚು ಶಾಲೆಗಳ ಸದಸ್ಯತ್ವ ಹೊಂದಿದೆ. ಸುಮಾರು ಅರ್ಧ ಕೋಟಿ ವಿದ್ಯಾರ್ಥಿ ಸಮೂಹಕ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿಯನ್ನು ಹೊಂದಿವೆ. ರಾಜ್ಯ ಸರಕಾರ ತನ್ನ ವಾರ್ಷಿಕ ಆಯವ್ಯಯದ ಅರ್ಧಕ್ಕಿಂತ ಅಧಿಕ ಭಾರವನ್ನು ಖಾಸಗಿ ಶಾಲೆಗಳು ಹೊತ್ತಿವೆ. ಇಂತಹ ಶಾಲೆಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿರುವುದು ದುರದೃಷ್ಟಕರ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸರಕಾರವೇ ನಡೆಸುತ್ತಿರುವ ಸರಕಾರಿ ಶಾಲೆಗಳಲ್ಲಿ ಕನಿಷ್ಠ ಸೌಕರ್ಯಗಳು ಹಾಗೂ ಪಾಠ ಮಾಡಲು ಶಿಕ್ಷಕರು ಇಲ್ಲ. ಇನ್ನೊಂದಡೆ ರಾಜ್ಯದ ಶಿಕ್ಷಣ ಇಲಾಖೆಯ ನಿಯಮಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ಮನಬಂದಂತೆ ಶುಲ್ಕವನ್ನು ವಿಧಿಸುವ ಕಾರ್ಪೊರೇಟ್ ಶಾಲೆಗಳು ನಿರ್ಮಾಣವಾಗಿವೆ. ಆದರೆ ಇವುಗಳ ಬಗ್ಗೆ ಗಮನವೇ ಇಲ್ಲದಂತೆ ರಾಜ್ಯ ಸರಕಾರ ವರ್ತಿಸುತ್ತಿದೆ’ ಎಂದರು.

‘ಪ್ರಧಾನಿ ಮೋದಿ ಅಮೃತ ಮಹೋತ್ಸವದ ಭಾಷಣದಲ್ಲಿ ಪ್ರಸ್ತಾಪಿಸಿರುವ ಭ್ರಷ್ಟಾಚಾರದ ನಿರ್ಮೂಲನೆಯ ಆಶಯಕ್ಕೆ ಅನುಗುಣವಾಗಿ, ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಸಂಘಟನೆಯು ಆಗ್ರಹಿಸಿದೆ. ಆದರೆ ರಾಜ್ಯ ಸರಕಾರವು ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಶಿಕ್ಷಣ ಇಲಾಖೆಯ ಈ ಕಿರುಕುಳದ ಕುರಿತು ಮುಖ್ಯಮಂತ್ರಿಗಳಿಗೆ ದೂರನ್ನು ನೀಡಲಾಗಿದೆ. ಅವರು ಮಧ್ಯಸ್ಥಿಕೆಯನ್ನು ವಹಿಸಿ ಕ್ರಮ ವಹಿಸಬೇಕು’ ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News