ಬೆಂಗಳೂರು: 11 ಲಕ್ಷ ರೂ. ಕಾರಿನ ರಿಪೇರಿಗೆ 22 ಲಕ್ಷ ಬಿಲ್!

Update: 2022-10-02 12:00 GMT

ಬೆಂಗಳೂರು: ತನ್ನ 11 ಲಕ್ಷ ರೂ. ಬೆಲೆಯ Volkswagen ಕಾರು ರಿಪೇರಿಗೆ ಸರ್ವಿಸ್ ಸೆಂಟರ್ 22 ಲಕ್ಷ ರೂ. ಬಿಲ್ ಕಳುಹಿಸಿದ ವಿಲಕ್ಷಣ ಘಟನೆಯ ಬಗ್ಗೆ ಬೆಂಗಳೂರಿನ ಕಾರು ಮಾಲಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೆಝಾನ್ ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿರುವ ಅನಿರುಧ್ ಗಣೇಶ್ ಎಂಬವರು ಲಿಂಕ್ಡ್ ಇನ್ ನಲ್ಲಿ ತನಗೆ ಎದುರಾದ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಲ್ಲಿ ಗಣೇಶ್ ಅವರ ಕಾರು ನೀರಿನಲ್ಲಿ ಮುಳುಗಿತ್ತು ಹಾಗೂ ಕಾರಿಗೆ ಹಾನಿಯಾಗಿತ್ತು. ಪರಿಣಾಮ ಅವರು ಕಾರನ್ನು ವೈಟ್ ಫೀಲ್ಡ್ ನಲ್ಲಿರುವ Volkswagen Apple Auto ಸರ್ವಿಸ್ ಸೆಂಟರ್ ಗೆ ಕಳುಹಿಸಿದ್ದರು.

“ರಾತ್ರಿ 11 ಗಂಟೆ ಸುಮಾರಿಗೆ ಸೊಂಟದವೆರೆಗೆ ಇದ್ದ ನೀರಿನಲ್ಲಿ ಟೋಯಿಂಗ್ ಟ್ರಕ್ ಇರುವಲ್ಲಿಗೆ ತಾನೇ ತಳ್ಳಿಕೊಂಡು ಹೋಗಿದ್ದೆ. ಯಾರೂ ಸಹಾಯ ಮಾಡಲ್ಲ ಆದರೆ ನಾವು ಮದ್ಯಮ ವರ್ಗದ ಜನರು ಕಠಿಣ ಪರಿಶ್ರಮಿಗಳು. ಹೇಗಾದರೂ ನಮ್ಮ ಕೆಲಸ ಮಾಡಿಕೊಳ್ಳುತ್ತೇವೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇಪ್ಪತ್ತು ದಿನಗಳ ಬಳಿಕ ಸರ್ವಿಸ್ ಸೆಂಟರ್ ಅವರು ಕಳಿಸಿದ ರೂ. 22 ಲಕ್ಷದ ಬಿಲ್ ನೋಡಿ ದಿಗ್ಭ್ರಮೆಗೊಂಡ ಗಣೇಶ್ ಅವರು, ವಿಮೆ ಒದಗಿಸುವ ಖಾಸಗಿ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಕಾರನ್ನು ಸಂಪೂರ್ಣ ನಷ್ಟ ಎಂದು ಪರಿಗಣಿಸಿ ಸರ್ವಿಸ್ ಸೆಂಟರ್ ನಿಂದ ಪಡೆಯುವುದಾಗಿ ವಿಮೆ ಸಂಸ್ಥೆ ಗಣೇಶ್ ಅವರಿಗೆ ತಿಳಿಸಿದೆ.

ಕಾರನ್ನು ಬಿಡಿಸಿಕೊಳ್ಳಲು ಸುಮಾರು 45 ಸಾವಿರ ರೂ. ಪಾವತಿಮಾಡಬೇಕು. ಕಾರಿಗೆ ಆದ ಹಾನಿಯ ಬಗ್ಗೆ ದಾಖಲೆಗಳನ್ನು ನೀಡಲು ಈ ಮೊತ್ತ ಪಾವತಿಸಿಬೇಕು ಎಂದು ಗಣೇಶ್ ಅವರಿಗೆ ಸರ್ವಿಸ್ ಸೆಂಟರ್ ಹೇಳಿದೆ

ಗಣೇಶ್ ಅವರು ಇನ್ನೊಂದು ಮೇಲ್ ಕಳುಹಿಸಿದ ಬಳಿಕ Volkswagen ಸಂಸ್ಥೆ ಕಾರು ರಿಪೇರಿಗೆ 5000 ರೂ. ವೆಚ್ಚ ಮಾತ್ರ ಪಾವತಿಸಲು ಹೇಳಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಗಣೇಶ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಹಲವರು, ಗ್ರಾಹಕರನ್ನು ಶೋಷಣೆ ಮಾಡುತ್ತಿದೆ ಎಂದು ಸರ್ವಿಸ್ ಸೆಂಟರ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News