'ಭಾರತ್ ಜೋಡೋ' ದುರುದ್ದೇಶದ ಆಂದೋಲನ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-02 13:23 GMT

ಬೆಂಗಳೂರು, ಅ. 2: ‘ಎಐಸಿಸಿ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತ್ ಜೋಡೋ ಯಾತ್ರೆ' (ಸಿನಿಸ್ಟರ್) ದುರುದ್ದೇಶದ ಆಂದೋಲನ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೇವಡಿ ಮಾಡಿದ್ದಾರೆ.

ರವಿವಾರ ವಿಧಾನಸೌಧದಲ್ಲಿನ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಮ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ನಕಲಿ ಗಾಂಧಿಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಇಡೀ ಪಕ್ಷ ಜಾಮೀನಿನ ಮೇಲಿದೆ' ಎಂದು ವಾಗ್ದಾಳಿ ನಡೆಸಿದರು.

‘ಎಐಸಿಸಿಯ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲಿದ್ದು, ಅದೊಂದು ಬೇಲ್(ಜಾಮೀನು) ಪಾರ್ಟಿ. ಎಲ್ಲವೂ ಭ್ರಷ್ಟಾಚಾರದ ಆರೋಪದ ಮೇಲೆಯೇ ಇದೆ. ಕೆಪಿಸಿಸಿ ಅಧ್ಯಕ್ಷರು ಪಾದಯಾತ್ರೆಗೆ ಬಹಳ ಕಷ್ಟಪಡುತ್ತಿದ್ದಾರೆ. ಎರಡ್ಮೂರು ವರ್ಷಗಳಿಂದ ಪ್ರಕರಣ ನಡೆಯುತ್ತಿದೆ. ಹಿಂದೆ ಅವರಿಗೆ ಕರ್ನಾಟಕ ಎಟಿಎಂ ಆಗಿತ್ತು, ಈಗಿಲ್ಲ ಎಂಬ ಕೊರಗಿರಬಹುದು' ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.

‘ಇಲ್ಲಿ ಶೇ.40ರಷ್ಟು ಕಮಿಷನ್ ಏನೂ ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಯಾರಾದರೂ, ಎಲ್ಲಾದರೂ ಹೀಗೆ ನಡೆದಿದೆ ಎಂದು ದಾಖಲೆಗಳನ್ನು ನೀಡಿದರೆ ತನಿಖೆ ಮಾಡಿಸಲಾಗುವುದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಸುಖಾ ಸುಮ್ಮನೆ ಆರೋಪ ಮಾಡುವವರಿಗೆ ಉತ್ತರ ನೀಡಲು ಸಾಧ್ಯವಿಲ್ಲ' ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

‘ಚನ್ನಪಟ್ಟಣದ ಗಲಾಟೆಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸರಕಾರದ ಕಾರ್ಯಕ್ರಮ ಹಾಗೂ ಅಭಿವೃದ್ಧಿಯಲ್ಲಿ ರಾಜಕಾರಣ ಬೆರೆಸದೆ, ಶಿಷ್ಟಾಚಾರ, ಕಾನೂನು ಅನುಸರಿಸಬೇಕು. ನಾವೆಲ್ಲಾ ಬಹಳ ದೂರ ಬಂದಿದ್ದೇವೆ,  ಪ್ರಬುದ್ಧರಾಗಿದ್ದೇವೆ. ಅದೇ ರೀತಿ ನಡೆದುಕೊಳ್ಳುವುದು ಮುಖ್ಯ. ಇಲ್ಲಿ ಹಿಂಸೆಗೆ ಅವಕಾಶವಿಲ್ಲ. ಪ್ರತಿಷ್ಠೆಗಿಂತ ಅನುದಾನ ಜನರಿಗೆ ಮುಟ್ಟಬೇಕೆನ್ನುವುದು ಮುಖ್ಯ. ಪ್ರಕರಣದ ಕುರಿತು ವರದಿ ತರಿಸಿಕೊಳ್ಳಲಾಗುತ್ತಿದೆ' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News