ಬಿಜೆಪಿ ಸರಕಾರದಿಂದ ರೈತರ, ಗ್ರಾಮೀಣ ಜನರ ಬದುಕು ದುಸ್ತರವಾಗುತ್ತಿದೆ: ಮಾಜಿ ಸಚಿವ ಬಿ.ಬಿ.ನಿಂಗಯ್ಯ

Update: 2022-10-02 14:45 GMT

ಚಿಕ್ಕಮಗಳೂರು: ಬಿಜೆಪಿ ಸರಕಾರದ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ರೈತರು, ಗ್ರಾಮೀಣ ಭಾಗದ ಜನರು ತೀವ್ರ ಸಂಕಷ್ಟದಲ್ಲಿದ್ದರೂ ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಗ್ರಾಮೀಣ ಭಾಗದ ಜನರಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಆರೋಪಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿಗೆ ಒಳಪಟ್ಟಿರುವ ಹಾಗೂ ಮೂಡಿಗೆರೆ ವಿಧಾನಸಭೆ ಕ್ಷೇತ್ರಕ್ಕೆ ಸೇರಿರುವ ಗಂಜಲಗೂಡು, ಮತ್ತಿಕಟ್ಟೆ, ಬಾಣಾವರ, ಮಳಲೂರು ಗ್ರಾಪಂ ವ್ಯಾಪ್ತಿಯಲ್ಲಿನ ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸುಮಾರು 16 ಗ್ರಾಮಗಳ ಗ್ರಾಮಸ್ಥರು ರೈತಸಂಘ ಹಾಗೂ ವಿವಿಧ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಹಮ್ಮಿಕೊಂಡಿದ್ದ ಬೈಕ್ ಜಾಥಾ ಹಾಗೂ ಪ್ರತಿಭಟನಾ ಕಾರ್ಯಕ್ರಮಕ್ಕೆ ಬಾಣಾವರ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ತಾನು ಶಾಸಕನಾಗಿದ್ದ ಅವಧಿಯಲ್ಲಿ ಮೂಡಿಗೆರೆ ಕ್ಷೇತ್ರದ ಗಡಿ ಭಾಗದ ಗ್ರಾಮಗಳ ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಒಮ್ಮೆ 1 ಕೋ. ರೂ. ಅನುದಾನ, ಮತ್ತೊಮ್ಮೆ 75 ಲಕ್ಷ ರೂ. ಅನುದಾನ ಸೇರಿದಂತೆ ಮಳಲೂರು ನೀರಾವರಿ ಯೋಜನೆ ಜಾರಿಗೂ ಶ್ರಮಿಸಿದ್ದೆ. ನನ್ನ ಬಳಿಕ ಶಾಸಕರಾಗಿರುವವರು ಈ ಗ್ರಾಮಗಳ ಅಭಿವೃದ್ಧಿಯನ್ನು ಮರೆತಿದ್ದಾರೆ. ಸರಕಾರದ ಅನುದಾನವನ್ನು ತಮ್ಮ ಸ್ವಾರ್ಥಕ್ಕಾಗಿ ವಿನಿಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹಾಲಿ ರಾಜ್ಯ ಸರಕಾರ 40 ಪರ್ಸೆಂಟ್ ಕಮಿಶನ್ ಸರಕಾರ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದ ಸಿಎಂ ಮೈಗೆ ಎಣ್ಣೆ ಹಾಕಿಕೊಂಡು ತಿರುಗಾಡುತ್ತಿದ್ದು, ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಕೈಗೆ ಸಿಗುತ್ತಿಲ್ಲ. ಬಸವರಾಜ ಬೊಮ್ಮಾಯಿ ಅವರಿಂದ ವಿರೋಧ ಪಕ್ಷಗಳ ಮುಖಂಡರು ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಅವರು ಆರೆಸ್ಸೆಸ್, ಸಂಘಪರಿವಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಗ್ರಾಮೀಣ ಭಾಗಗಳ ಅಭಿವೃದ್ಧಿ ನಿರ್ಲಕ್ಷ್ಯಿಸಿದ್ದಾರೆ. 16 ಹಳ್ಳಿಗಳ ಗ್ರಾಮಗಳ ಸಂಪರ್ಕದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಆಗ್ರಹಿಸಿ ಈ ಭಾಗದ ಜನರು ಗಾಂಧಿ ಜಯಂತಿಯ ದಿನದಂದೇ ಹೋರಾಟ ರೂಪಿಸಿರುವುದು ಉತ್ತಮ ಬೆಳವಣಿಗೆ. ರೈತರ ಬೇಡಿಕೆಯನ್ನು ಸರಕಾರ, ಮೂಡಿಗೆರೆ ಶಾಸಕರು ಮುಂದಿನ ಚುನಾವಣೆಯೊಳಗೆ ಈಡೇರಿಸಬೇಕು. ತಪ್ಪಿದಲ್ಲಿ ಈ ಭಾಗದ ಜನರೊಂದಿಗೆ ಸೇರಿ ಮತ್ತಷ್ಟು ಉಗ್ರ ಹೋರಾಟ ರೂಪಿಸಲಾಗುವುದು ಎಂದರು.

ರೈತ ಸಂಘದ ಮುಖಂಡ ಕೃಷ್ಣೇಗೌಡ ಮಾತನಾಡಿ, ಈ ಭಾಗದ ಗ್ರಾಮಗಳ ಜನರು ಸಮರ್ಪಕ ರಸ್ತೆ ಇಲ್ಲದೇ ಕೃಷಿ ಚಟುವಟಿಕೆ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಹದಗೆಟ್ಟಗಳ ರಸ್ತೆಯಿಂದಾಗಿ ಈ ಭಾಗದ ಜನರ ಬದುಕೇ ದುಸ್ತರವಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದರೂ ಅವರು ಈ ಭಾಗವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯವಹಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ, ಬಾಣಾವರ, ಮತ್ತಿಕಟ್ಟೆ, ಗಂಜಲಗೂಡು, ಮಳಳೂರು ಗ್ರಾಮಗಳ ಸಂಪರ್ಕದ ಸುಮಾರು 15 ಕಿಮೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಗುಂಡಿಗೊಟರುಗಳಿಂದಾಗಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ರಸ್ತೆ ಅವ್ಯವಸ್ಥೆಯಿಂದಾಗಿ ಗ್ರಾಮೀಣ ಜನರ ಸಾರಿಗೆ ಸಂಪರ್ಕಕ್ಕೂ ಅನಾನುಕೂಲವಾಗಿದೆ. ಕಳೆದ 15 ವರ್ಷಗಳಿಂದ ರಸ್ತೆ ದುರಸ್ತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಂದಿನ 15 ದಿನಗಳಲ್ಲಿ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ರಸ್ತೆ ದುರಸ್ತಿಗೆ ಅನುದಾನ ಮೀಸಲಿಡದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಸುಮಾರು 16 ಹಳ್ಳಿಗಳ ನೂರಾರು ರೈತರು, ಸಾರ್ವಜನಿಕರು ಬಾಣಾವರದಿಂದ ಚಿಕ್ಕಮಗಳೂರು ನಗರದವರೆಗೆ ಬೈಕ್ ಜಾಥಾ ನಡೆಸಿ ಬಹಿರಂಗ ಸಭೆ ನಡೆಸಿ ಶೀಘ್ರ ರಸ್ತೆ ದುರಸ್ತಿಗೆ ಆಗ್ರಹಿಸಿದರು. ಧರಣಿಯಲ್ಲಿ ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಮುಖಂಡರಾದ ಎಚ್.ಎಚ್.ದೇವರಾಜ್, ರಂಜನ್ ಅಜಿತ್, ಆನಂದೇಗೌಡ, ಮಂಜಪ್ಪ ಸೇರಿದಂತೆ ರೈತಸಂಘದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News