ಸೂಚನೆ ನೀಡಿದ್ದಕ್ಕೆ ಬೇಡ ಎನ್ನಲು ಅಧಿಕಾರಿಗಳು ಹಿಟ್ಲರ್‍ಗಳೇ?: ಸಚಿವ ಪ್ರಹ್ಲಾದ್ ಜೋಶಿ

Update: 2022-10-02 15:36 GMT
ಪ್ರಹ್ಲಾದ್ ಜೋಶಿ

ಧಾರವಾಡ: ‘ಹುಬ್ಬಳ್ಳಿ ನಗರದಲ್ಲಿ ಮೇಲ್ಸೆತುವೆಯೊಂದರ ವಿನ್ಯಾಸಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾನು ಏನು ಸೂಚನೆ ನೀಡಿದ್ದೆನೋ ಅದನ್ನು ಬೇಡ ಎನ್ನಲು ಅಧಿಕಾರಿಗಳೇನು ಹಿಟ್ಲರ್‍ಗಳೇ' ಎಂದು ರಾಜ್ಯ ಸರಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ‘ದಿಶಾ’ ಸಭೆಯಲ್ಲಿ ಮಾತನಾಡಿದ ಅವರು, ಇದು ಸಾರ್ವಜನಿಕರ ಆಸ್ತಿಯಾಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಭಯಗೊಳ್ಳುವ ಅಗತ್ಯವಿಲ್ಲ. ಈ ಕುರಿತು ಮಂಜುಳಾ ಸಭೆ ಮಾಡಿ ಬನ್ನಿ ಎಂದರೂ ನೀವು ಹೋಗಬೇಡಿ. ನಾನು ಹೇಳಿದಂತೆ ಮಾಡಿ. ಮುಂದೆ ಏನಾಗುತ್ತದೋ ನೋಡೋಣ. ಅಭಿವೃದ್ಧಿ ವಿಚಾರದಲ್ಲಿ ತಮಾಷೆ ಸಹಿಸಲಾಗದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮೇಲು ಸೇತುವೆ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಹೊಸೂರು ವೃತ್ತದಿಂದ ಪಾಲಿಕೆವರೆಗೆ ಮೇಲು ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಇದಕ್ಕೆ ಡೆಲ್ಟ್ ನಿರ್ದೇಶಕರೂ ಆಗಿರುವ ವಿ.ಮಂಜುಳಾ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಿಆರ್‍ಟಿಎಸ್ ಬಸ್ ನಿಲ್ದಾಣಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನುತ್ತಿದ್ದಾರೆ. ಹೀಗಾಗಿ ನಮಗೆ ಏನೂ ತೋಚುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ ಬೆಲ್ಲದ, ವಿ.ಮಂಜುಳಾ ಅವರು ಬಿಆರ್‍ಟಿಎಸ್ ಆಸ್ತಿ ಮುಟ್ಟಬೇಡಿ ಎನ್ನುತ್ತಿದ್ದಾರೆ. ಸಾರ್ವಜನಿಕರಿಗೆ ಸಹಾಯವಾಗಬಲ್ಲ ಕಾಮಗಾರಿಗೆ ಸರಕಾರದ ಅಧಿಕಾರಿಗಳೇ ಅಡೆತಡೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News