ಕಮಲದ ಹೂವಿನಂತೆಯೇ ಗಾಂಧಿಜಿ: ಬಸವರಾಜ ಬೊಮ್ಮಾಯಿ

Update: 2022-10-02 16:59 GMT

ಬೆಂಗಳೂರು: ಕೆಸರಲ್ಲಿದ್ದರೂ ಕಮಲದ ಹೂವಿನಂತೆ ಶುದ್ಧವಾದ ಗುಣ ಧರ್ಮವನ್ನು ಕಾಪಾಡಿಕೊಂಡು ಬೆಳೆದವರು ಮಹಾತ್ಮ ಗಾಂಧಿಜಿಯವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ವ್ಯಾಖ್ಯಾನಿಸಿದರು.

ರವಿವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಆಯೋಜಿಸಿದ್ದ, ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧಿ ಅವರು ಪಲಾಯನವಾದಿಗಳಾಗಿರಲಿಲ್ಲ. ಕೆಸರಲ್ಲಿದ್ದರೂ ಕಮಲದ ಹೂವಿನಂತೆ ಶುದ್ಧವಾದ ಗುಣ ಧರ್ಮವನ್ನು ಕಾಪಾಡಿಕೊಂಡು ಬೆಳೆದವರು ಗಾಂಧಿಜಿಯವರು. ಮಹಾತ್ಮಾ ಗಾಂಧಿಜಿ ಅವರು ಆಲೋಚನೆಗಳು ಮತ್ತು ಮೌಲ್ಯಗಳ ಆತ್ಮ. ಮಹಾತ್ಮಾ ಗಾಂಧಿ ಅವರಲ್ಲಿ ಮುಗ್ಧತೆಯೂ ಇತ್ತು ಮತ್ತು ಆತ್ಮ ಸಾಕ್ಷಿಯೂ ಇತ್ತು ಎಂದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಒಬ್ಬರು ಮುಂದೆ ಬದಲಾವಣೆಗೆ ಅರ್ಪಿಸಿಕೊಂಡು, ಮೌಲ್ಯಗಳನ್ನು ರೂಢಿಸಿಕೊಂಡು, ಪ್ರತಿಹಂತದಲ್ಲಿ ಎತ್ತರಕ್ಕೆ ಏರಿ ಶಕ್ತಿಯಾಗಿ ಬೆಳೆದು ಸತ್ಯದ ಮಾರ್ಗದಿಂದ ಇತರರಿಗೆ ದಾರಿ ದೀಪವಾಗಿ ದೇಶಕ್ಕೆ ಸ್ವಾತಂತ್ರ್ಯ ತರಲು ಹೊಸ ದಿಕ್ಕನ್ನ ತೋರಿಸಿದರು ಎಂದು ನುಡಿದರು.

ಬದುಕಿನಲ್ಲಿ ಹತ್ತು ಹಲವು ಅವಮಾನಗಳನ್ನು ಸಹಿಸಿಕೊಂಡು, ಹಲವು ಬಾರಿ ತಮ್ಮ ಆತ್ಮಸಾಕ್ಷಿ ವಿರುದ್ಧ ಕೆಲಸ ಮಾಡಿ ನಂತರ ಪಶ್ಚಾತ್ತಾಪ ಪಟ್ಟು ಪರಿವರ್ತನೆ ಆಗಿ ನಿರಂತರ ಶುದ್ಧೀಕರಣದಲ್ಲಿ ಇದ್ದವರು ಮಹಾತ್ಮಾ ಗಾಂಧಿಜಿ ಎಂದು ಬೊಮ್ಮಾಯಿ ಅವರು ಹೇಳಿದರು.

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಸಾಮಾನ್ಯ ಮನುಷ್ಯನಿಂದ ಮಹಾತ್ಮ ಹೇಗೆ ಆಗಬಹುದು ಎಂಬುದಕ್ಕೆ ಉದಾಹರಣೆ ಮಹಾತ್ಮಾ ಗಾಂಧಿಜಿ ಅವರು. ಏನನ್ನೂ ಮುಚ್ಚಿಡದೇ ತಮ್ಮ ಆತ್ಮಚರಿತ್ರೆಯನ್ನು ತೆರೆದ ಪುಸ್ತಕವಾಗಿ ನಮ್ಮ ಮುಂದಿಟ್ಟಿದ್ದಾರೆ. ಬದುಕಿನಲ್ಲಿ ಎಂತಹುದೇ ಕಷ್ಟದ ಸಂದರ್ಭ ಬಂದರೂ ಒಮ್ಮೆ ಗಾಂಧಿಜಿ ಅವರ ಜೀವನ ಚರಿತ್ರೆ ಓದಿದರೆ ಅದಕ್ಕೆ ಪರಿಹಾರ ಸಿಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News