ದೇಶದ ಭದ್ರತೆ, ಸುರಕ್ಷತೆಯಲ್ಲಿ ರಾಜಕಾರಣ ಮಾಡಿದರೆ ಕ್ಷಮೆಯಿಲ್ಲ: ಸಿಎಂ ಬೊಮ್ಮಾಯಿ

Update: 2022-10-02 17:08 GMT
ಸಿಎಂ ಬೊಮ್ಮಾಯಿ (File Photo)

ಬೆಂಗಳೂರು: ದೇಶದ ಭದ್ರತೆ, ಸುರಕ್ಷತೆಯ ಬಗ್ಗೆ ರಾಜಕಾರಣ ಮಾಡಿದರೆ ಯಾರೂ ಕ್ಷಮಿಸುವುದಿಲ್ಲ. ಹಲವಾರು ರಾಜಕೀಯ ಪಕ್ಷಗಳು ಪರೋಕ್ಷವಾಗಿ, ಕೆಲವರು ನೇರವಾಗಿ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿರುವುದನ್ನು ದೇಶದ ಜನರು ನೋಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಸವನಗುಡಿಯ ಗೋಸಾಯಿ ಮಠದಲ್ಲಿ ದಸರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಭದ್ರತೆಯ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಇಂತಹ ಜನರಿಂದ ಎಷ್ಟರಮಟ್ಟಿಗೆ ದೇಶದ ರಕ್ಷಣೆ ಸಾಧ್ಯ ಎನ್ನುವುದು ಜನಸಾಮಾನ್ಯರಿಗೆ ಗೊತ್ತಿದೆ. ಶಿವಾಜಿ ಮಹಾರಾಜರು ಪ್ರಾರಂಭ ಮಾಡಿದಂತಹ ಹೋರಾಟವನ್ನು ಈ ದೇಶ ಉಳಿಸಲು ಮಾಡಬೇಕಾದ ಅವಶ್ಯಕತೆ ಇದೆ. ಅಂತಹ ಪರಂಪರೆಗೆ ಗೋಸಾಯಿ ಕುಲದ ಜನರು ಸೇರಿದ್ದಿರಿ ಎಂದರು. 

ಯೋಜನಾಬದ್ಧ, ನಿರ್ದಿಷ್ಟ ಗುರಿ ಇಟ್ಟುಕೊಂಡು ಶಿವಾಜಿ ಮಹಾರಾಜರು ಕೆಲಸ ಮಾಡುತ್ತಿದ್ದರು. ಅಂತಹ ಪರಂಪರೆಗೆ ಮರಾಠರು ನೀವು ಸೇರಿದ್ದೀರಿ ಎನ್ನುವ ಅರಿವು ನಿಮಗಿರಬೇಕು. ಶಿವಾಜಿ ಮಹಾರಾಜರ ಆದರ್ಶಗಳಂತೆ ಪ್ರಜಾಪ್ರಭುತ್ವದಲ್ಲಿ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಭಯೋತ್ಪಾದನೆಯ ಮೇಲೆ ಸಂಪೂರ್ಣವಾದ ನಿಯಂತ್ರಣ ವಿರುವ ನಾಯಕತ್ವ ದೇಶದಲ್ಲಿದೆ. ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೆ ತನ್ನ ದೇಶದ ಬಗ್ಗೆ ಹೆಮ್ಮೆ ಪಡುವಂತೆ ನರೇಂದ್ರ ಮೋದಿಯವರು ಆಡಳಿತ ಮಾಡುತ್ತಿದ್ದಾರೆ. ಈ ಭಾವನೆ ಬಹಳ ಮುಖ್ಯ ಎಂದು ಮುಖ್ಯಮಂತ್ರಿಗಳು ನುಡಿದರು. ಗೋಸಾಯಿ ಮಠದ ಮಂಜುನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಮರಾಠ ಸಮುದಾಯ ನಡೆಯುತ್ತಿದೆ.

ಆಳವಾಗಿ ಅಧ್ಯಯನ ಮಾಡಿ ಅದಕ್ಕೆ ತಾತ್ವಿಕ ಸ್ವರೂಪ ಕೊಟ್ಟು ಮಾರ್ಗದರ್ಶನ ಮಾಡುವ ಶಕ್ತಿ ಸ್ವಾಮೀಜಿಗಳಿಗೆ ಇದೆ. ನಾಡಿನೆಲ್ಲೆಡೆ ಅವರು ತೆಗೆದುಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ನಾವೆಲ್ಲರೂ ಸೇರಿ ಬೆಂಬಲ ಕೊಡುತ್ತೇವೆ ಎಂದರು. ದಸರಾ ದುಷ್ಟ ಸಂಹಾರ, ಶಿಷ್ಟರ ರಕ್ಷಣೆಯ ಪ್ರತೀಕ. ದೇಶದಲ್ಲಿ ವಿವಿಧ ರೀತಿಯಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ನಮ್ಮೊಳಗಿನ ರಾಕ್ಷಸ ಗುಣಗಳನ್ನು ನಿಗ್ರಹಿಸುವ ಸಂಕಲ್ಪವನ್ನು ಈ ದಿನ ಮಾಡೋಣ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News