ಮೈಸೂರು: ಗಾಂಧಿ ಜಯಂತಿ ಅಂಗವಾಗಿ ಬದನವಾಳು ಗ್ರಾಮಕ್ಕೆ ರಾಹುಲ್ ಭೇಟಿ

Update: 2022-10-02 17:38 GMT

ಮೈಸೂರು: ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಭೇಟಿ ನೀಡಿದ್ದ ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ  ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ರವಿವಾರ  ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗಕ್ಕೆ ತೆರಳಿ  ಗಾಂಧಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಬೆಳಿಗ್ಗೆ 7.30 ಗಂಟೆಯಿಂದ ಮಧ್ಯಾಹ್ನದವರೆಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಮಹಾತ್ಮ ಗಾಂಧೀಜಿ ಅವರು ಬದನವಾಳು ಗ್ರಾಮಕ್ಕೆ 1927 ಮತ್ತು 1937 ಎರಡು ಬಾರಿ ಭೇಟಿ ನೀಡಿ ಖಾದಿ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿ ಚರಕದ ಮಗ್ಗಗಳನ್ನು ನೀಡಿದ್ದರು. ಇವರ ನೆನಪಿಗಾಗಿ ಈ ಸ್ಥಳದಲ್ಲಿ ಪುತ್ಥಳಿಯನ್ನು ನಿರ್ಮಿಸಿ ಅವರು ಬಂದ ಇಸವಿಯ ಕಲ್ಲನ್ನು ನೆಡಲಾಗಿದೆ.

ಈ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಗಾಂಧಿ ಪಠಣ ಮಾಡಿದರು. ಬಳಕೆ ಇಲ್ಲಿಗೆ ಭೇಟಿ ನೀಡಿರುವ ನೆನಪಿಗಾಗಿ ಗಿಡವನ್ನು ನೆಟ್ಟರು. 

ಇಲ್ಲಿನ ನೇಕಾರರೊಂದಿಗೆ ಒಂದು ಗಂಟೆಗೂ ಹೆಚ್ವು ಸಮಯ ಸಂವಾದ ನಡೆಸಿ ಅವರು ತಯಾರಿಸಿದ ಉತ್ಪನ್ನಗಳ ಮಾರಾಟ ಮತ್ತು ಅಲ್ಲಿನ ಸ್ಥಿಗತಿಗಳ ಕುರಿತು ಮಾಹಿತಿ ಪಡೆದರು.

ರಾಹುಲ್ ಗಾಂಧಿ ಯೊಂದಿಗೆ ಆಗಮಿಸಿದ್ದ ಸೇವಾ ದಳ ಮತ್ತು ಕೆಲವು ಉತ್ತರ ಭಾರತದ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಪಠಣದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮೊದಲು ರಾಹುಲ್ ಗಾಂಧಿ ಬದನವಾಳು ಗ್ರಾಮದ ಮುಂಭಾಗ ಚಾಮರಾಜನಗರ-ನಂಜನಗೂಡು ರಸ್ತೆಯಿಂದ ಖಾದಿ ಗ್ರಾಮೋದ್ಯೋಗ ಕೇಂದ್ರದವರೆಗೆ 1 ಕೀ.ಮೀ.ಪಾದಯಾತ್ರೆಯಲ್ಲಿ ಆಗಮಿಸಿದರು. ಈ ವೇಳೆ ಹಲವಾರು ಹೆಣ್ಣು ಮಕ್ಕಳು ಅವರೊಟ್ಟಿಗೆ ಹೆಜ್ಜೆ ಹಾಕಿ ಅವರೊಂದಿಗೆ ಮಾತುಕತೆ ನಡೆಸಿದರು. ರಾಹುಲ್ ಗಾಂಧಿಯೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ಮುಖಂಡರುಗಳಾದ ಕೆ.ಸಿ.ವೇಣುಗೋಪಾಲ್, ಪವನ್ ಕೇರಾ, ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹಮದ್, ಆರ್.ಧ್ರುವನಾರಾಯಣ, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಡಾ.ಬಿ.ಜೆ.ವಿಜಯಕುಮಾರ್, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News