ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂಪಡೆದ ಕೇಸುಗಳಿಗೆ ಡಿಜಿಪಿ ಒಪ್ಪಿಗೆ ಇತ್ತೇ?: ಸಚಿವ ಅಶೋಕ್‍ಗೆ ಸಿದ್ದರಾಮಯ್ಯ ಪ್ರಶ್ನೆ

Update: 2022-10-03 12:59 GMT

ಬೆಂಗಳೂರು, ಅ. 3: ‘ಭಾರತ ಐಕ್ಯತಾ ಯಾತ್ರೆ' ಯಶಸ್ಸು ಮತ್ತು ಅದಕ್ಕೆ ಸಿಗುತ್ತಿರುವ ಜನಮನ್ನಣೆ ಗಮನಬೇರೆಡೆಗೆ ಸೆಳೆಯಲು ಬಿಜೆಪಿ ತನ್ನ ಸನಾತನ ಸುಳ್ಳು ಪಾಂಡಿತ್ಯಕ್ಕೆ ಮೊರೆ ಹೋಗಿದೆ. ತಮಗೆ ವಹಿಸಿದ ಖಾತೆ ನಿರ್ವಹಿಸಲಾಗದೆ ನಾಡಿನ ಜನರನ್ನು ಮಳೆ-ಪ್ರವಾಹದ ಪ್ರಪಾತದಲ್ಲಿ ಮುಳುಗಿಸಿದ ಸಚಿವ ಆರ್.ಅಶೋಕ್ ಬಾಯಲ್ಲಿ ಹಳೆ ಸುಳ್ಳನ್ನು ಹೇಳಿಸಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು,‘ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಆರೋಪದ ಬಗ್ಗೆ ನಾನೇ 4 ಬಾರಿ ಸರಕಾರಕ್ಕೆ ಪತ್ರ ಬರೆದು, ನಮ್ಮ ಅವಧಿಯಲ್ಲಿ ಯಾವ ಪಿಎಫ್‍ಐ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರಕಾರಕ್ಕೆ ಉತ್ತರ ಕೇಳಿದ್ದೆ. ಆದರೆ ನನಗೆ ಸರಕಾರವೇ ಕೊಟ್ಟಿರುವ ಉತ್ತರದಲ್ಲಿ ಎಲ್ಲೂ ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಉಲ್ಲೇಖಗಳೇ ಇಲ್ಲ. ಇದನ್ನೆ ನಾನು 4ದಿನದ ಹಿಂದೆ ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದೆ' ಎಂದು ವಿವರಣೆ ನೀಡಿದರು.

‘ಆ ಹೇಳಿಕೆಯಲ್ಲೇ ನಾನು ಶಿವಮೊಗ್ಗ, ಹಾಸನದಲ್ಲಿ ‘ಫರ್ದಾ ಏ ಫರ್ದಾ' ಲೇಖನ ವಿರೋಧಿಸಿ ನಡೆದಿದ್ದ ಪ್ರತಿಭಟನೆಗಳನ್ನೂ ಉಲ್ಲೇಖಿಸಿ ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದ್ದನ್ನು ಹೇಳಿದ್ದೆ. ಈ ಪ್ರಕರಣಗಳಲ್ಲಿ ಪಿಎಫ್‍ಐ ಕಾರ್ಯಕರ್ತರು ಇದ್ದರು ಎನ್ನುವ ಬಗ್ಗೆ ಬಿಜೆಪಿ ಸರಕಾರವೇ ನನಗೆ ಕೊಟ್ಟ ಉತ್ತರದಲ್ಲಿ ಉಲ್ಲೇಖಗಳಿಲ್ಲ. ಬಿಜೆಪಿ ಸರಕಾರ ನನಗೆ ನೀಡಿರುವ ಉತ್ತರದಲ್ಲಿ ನಮ್ಮ ಸರಕಾರ ರೈತರು, ಕಾರ್ಮಿಕರು, ಪೌರಕಾರ್ಮಿಕರು, ಕಬ್ಬು ಬೆಳೆಗಾರರು, ಕಮ್ಯುನಿಸ್ಟ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಬಗ್ಗೆ ಉಲ್ಲೇಖಗಳಿವೆ. ಸಚಿವ ಆರ್.ಅಶೋಕ್ ಇವುಗಳ ಬಗ್ಗೆ ಏನನ್ನೂ ಪ್ರಸ್ತಾಪ ಮಾಡಿಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

‘ಯಾವುದೇ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಒಂದೇ ಸಮುದಾಯಕ್ಕೆ, ಒಂದೇ ಕೋಮಿಗೆ ಸೇರಿದವರು ಎನ್ನುವ ಒಂದೇ ಕಾರಣದಿಂದ ಎಲ್ಲರನ್ನೂ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಎಂದು ಬಿಂಬಿಸುವುದು, ಪಿಎಫ್‍ಐಗೂ ತಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಆರೋಪಿಗಳನ್ನೂ ಆ ಸಂಘಟನೆಗೆ ಜಮೆ ಮಾಡುವ ಷಡ್ಯಂತ್ರಕ್ಕೆ ಆರ್.ಅಶೋಕ್‍ರನ್ನು ಬಿಜೆಪಿ ಮುಂದೆ ಬಿಟ್ಟಿದೆ. ಆರೋಪಿಗಳು ಪಿಎಫ್‍ಐ ಕಾರ್ಯಕರ್ತರಾಗಿದ್ದರು ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಎಲ್ಲಕ್ಕಿಂತ ಸರಕಾರ ನನಗೆ ಕೊಟ್ಟಿರುವ ಉತ್ತರದಲ್ಲಿ ಇವುಗಳ ಪ್ರಸ್ತಾಪವೇ ಇಲ್ಲ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ತನ್ನ ತಟ್ಟೆಯಲ್ಲಿರುವ ಸತ್ತ ಹಗ್ಗೆಣವನ್ನು ಪಕ್ಕದವರ ತಟ್ಟೆಗೆ ಬಿಸಾಡುವ ಪಾಂಡಿತ್ಯವನ್ನು ಬಿಜೆಪಿ ಪ್ರದರ್ಶಿಸಿದೆ. ಇದಕ್ಕೆಶಾಸಕ ಬಸವಗೌಡ ಯತ್ನಾಳ್ ಅವರ ಹೇಳಿಕೆಯೇ ಸಾಕ್ಷಿ. ‘ಪಿಎಫ್‍ಐ ಕಾಂಗ್ರೆಸ್‍ನ ಓಟಿನ ಬ್ಯಾಂಕನ್ನು ಛಿದ್ರ ಮಾಡುತ್ತಿತ್ತು' ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸತ್ಯ ತಾನೇ? ಕಾಂಗ್ರೆಸ್ ಓಟಿನ ಬ್ಯಾಂಕನ್ನು ಛಿದ್ರ ಮಾಡುವವರಿಗೆ ಬಿಜೆಪಿ ಬೆಂಬಲಿಸುತ್ತಿರಲಿಲ್ಲವೇ?' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಬಿಜೆಪಿ ಸರಕಾರ ಹಿಂಪಡೆದಿರುವ ನೂರಾರು ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳ ವಾಹನಕ್ಕೆ ಬೆಂಕಿ ಹಚ್ಚಿದ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ, ಶಾಂತಿ ಹದಗೆಡಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ, ದ್ವೇಷ ಭಾಷಣಕೋರರ ಮೇಲಿನ ಪ್ರಕರಣಗಳೂ ಸೇರಿವೆ. ಇವುಗಳನ್ನು ಹಿಂಪಡೆಯಲು ಡಿಜಿ-ಐಜಿಪಿ ಮತ್ತು ಕಾನೂನು ಇಲಾಖೆ ಒಪ್ಪಿಗೆ ನೀಡಿತ್ತೆ ಆರ್.ಅಶೋಕ್ ಅವರೇ?, ಹಾಗೇಯೇ ಸಂಘ ಪರಿವಾರದ ಅಂಗಳದಲ್ಲೇ ಇದ್ದು ಹೊರಗೆ ಬಂದಿರುವ ಸತ್ಯಜಿತ್ ಸುರತ್ಕಲ್ ಅವರು, ಪಿಎಫ್‍ಐ ಮತ್ತು ಎಸ್‍ಡಿಪಿಐ ಎರಡೂ ಬಿಜೆಪಿಯ ‘ಬಿ' ಟೀಮ್ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದನ್ನೂ ಬಿಜೆಪಿ ಮತ್ತು ಸಂಘ ಪರಿವಾರ ಅಲ್ಲಗಳೆದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಿಎಫ್‍ಐ ಮತ್ತು ಎಸ್‍ಡಿಪಿಐ ಚಟುವಟಿಕೆಗಳಿಂದ ಹೆಚ್ಚು ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಬಿಜೆಪಿಯೇ ಎನ್ನುವುದು ಇಡಿ ರಾಜ್ಯದ ಜನತೆಗೆ ಗೊತ್ತಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ನಮ್ಮ ಸರಕಾರ ರೈತರ, ಕಬ್ಬು ಬೆಳೆಗಾರರ, ಪೌರ ಕಾರ್ಮಿಕರ, ಕಾರ್ಮಿಕ ಸಂಘಟನೆಗಳ, ದಲಿತ ಸಂಘಟನೆಗಳ ಮುಖಂಡರ ಮತ್ತು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಾಗಲೂ, ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತ ಅಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು.ಅಂದ ಮಾತ್ರಕ್ಕೆ ನಾವು ರೈತರ ಕಾರ್ಮಿಕರ ಮೇಲಿನ ಪ್ರಕರಣಗಳನ್ನು ಮುಂದುವರೆಸಬೇಕಿತ್ತೇ? ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಮುಸ್ಲಿಮರಾಗಿದ್ದಾರೆ. ಅವರೆಲ್ಲರನ್ನೂ ಪಿಎಫ್‍ಐ ಎಂದು ಬಿಂಬಿಸಿ ತಮ್ಮ ಸುಳ್ಳಿನ ಭಜನೆ ಮಾಡಿದರೆ ಜನ ನಂಬುವುದಿಲ್ಲ'

-ಸಿದ್ಧರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News