ಕೊನೆ ಕ್ಷಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಕೊಡಗು ಭೇಟಿ ರದ್ದು

Update: 2022-10-03 14:21 GMT

ಮಡಿಕೇರಿ ಅ.3 : ಕಾಂಗ್ರೆಸ್ ಪಕ್ಷ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ 3 ದಿನಗಳ ಕೊಡಗು ಖಾಸಗಿ ಭೇಟಿ ಕಾರ್ಯಕ್ರಮ ರದ್ದಾಗಿದೆ.

ಜಿಲ್ಲೆಯಲ್ಲಿ ದಟ್ಟ ಮೋಡ ಕವಿದ ವಾತಾವರಣ ಮತ್ತು ಮಂಜು ಮುಸುಕಿರುವುದರಿಂದ ಹೆಲಿಕಾಫ್ಟರ್ ಹಾರಾಟ ಕಷ್ಟಸಾಧ್ಯವಾಗಿರುವ ಕಾರಣದಿಂದ ಕೊನೆ ಕ್ಷಣದಲ್ಲಿ ಜಿಲ್ಲೆಯ ಪ್ರವಾಸ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಬದಲಾಗಿ ಅವರುಗಳು ಕಬಿನಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ. 

ನಗರದ ಗಾಲ್ಫ್ ಮೈದಾನದ ಹೆಲಿಪ್ಯಾಡ್‍ಗೆ ಆಗಮಿಸುವ ಕುರಿತು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಮುಖರಿಗೆ ಮಾಹಿತಿ ನೀಡಲಾಗಿತ್ತು. ಮಾತ್ರವಲ್ಲದೇ ಭದ್ರತೆಗಾಗಿ ಕೇಂದ್ರ ಮೀಸಲು ಪಡೆಯ ಅಂಗ ರಕ್ಷಕರ ತಂಡವೂ ಮಡಿಕೇರಿಗೆ ದಿನ ಮೊದಲೇ ಆಗಮಿಸಿ ವಾಸ್ತವ್ಯ ಹೂಡಿತ್ತಲ್ಲದೇ, ರಸ್ತೆ ಮಾರ್ಗದಲ್ಲಿ ಮೇಕೇರಿ ಸಮೀಪದ ರೆಸಾರ್ಟ್‍ಗೆ ತೆರಳುವ ಮಾರ್ಗದಲ್ಲಿ ರಿಹಸಲ್ ನಡೆಲಾಗಿತ್ತು. 

ಪೂರ್ವ ನಿಗಧಿಯಂತೆ ಅ.3ರ ಮಧ್ಯಾಹ್ನ 1.15 ಗಂಟೆಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಬರಮಾಡಿಕೊಳ್ಳುವ ಸಲುವಾಗಿ ಕಾಂಗ್ರೇಸ್ ಮುಖಂಡರು ಗಾಲ್ಫ್ ಮೈದಾನಕ್ಕೆ ತೆರಳಿದ್ದರು. ಆದರೆ ಕೊನೆ ಹಂತದಲ್ಲಿ ಪ್ರವಾಸ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಎಲ್ಲರೂ ಮರಳಿದರು. 

ಇದನ್ನೂ ಓದಿ: ಮೈಸೂರು: ʼಭಾರತ್ ಜೋಡೊʼ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸೋನಿಯಾ ಗಾಂಧಿ ಆಗಮನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News